ಬೆಲೇಕೇರಿಗೆ ಬರಲಿದೆ 4000 ಕೋಟಿ ವೆಚ್ಚದ ಬೃಹತ್ ಬಂದರು ಯೋಜನೆ| ಹೊನ್ನಾವರ – ಪಾವಿನ ಕುರ್ವಾ ಖಾಸಗಿ ಸಹಭಾಗಿತ್ವದ ಬಂದರು ಯೋಜನೆಗೂ ಹಸಿರು ನಿಶಾನೆ ತೋರಿದ ಸರ್ಕಾರ

ಕಾರವಾರ: ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ 5ನೇ ಸಭೆಯು ಬೆಂಗಳೂರಿನಲ್ಲಿ ನಡೆಯಿತು.

ಅಂಕೋಲಾ ತಾಲ್ಲೂಕಿನ ಬೇಲಿಕೇರಿಯಲ್ಲಿ 40 ಮೆಟ್ರಿಕ್ ಟನ್ ಸರಕು ಸಾಮರ್ಥ್ಯದ 3997 ಕೋಟಿ ವೆಚ್ಚದ ಬಂದರು ಹಾಗೂ ಹೊನ್ನಾವರ ತಾಲ್ಲೂಕಿನ ಪಾವಿನಕುರ್ವೆಯಲ್ಲಿ 14 ಮೆಟ್ರಿಕ್ ಟನ್ ಸರಕು ಸಾಮರ್ಥ್ಯದ 1967 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದ ಬಂದರನ್ನು ಅಭಿವೃದ್ಧಿಪಡಿಸಲು ಇಂದಿನ ಸಭೆಯಲ್ಲಿಸರಕಾರವು ಹಸಿರು ನಿಶಾನೆ ತೋರಿದೆ.

ಬೇಲಿಕೇರಿ ಹಾಗೂ ಪಾವಿನಕುರ್ವೆ ಬಂದರುಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ಅನುಮೋದನೆ ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದ ಅನಂತಕುಮಾರ ಹೆಗಡೆ, ಸಾಗರಮಾಲಾ ಯೋಜನೆಯಡಿಯಲ್ಲಿ ಕರಾವಳಿ ಭಾಗದಲ್ಲಿ ಬಂದರುಗಳು ನಿರ್ಮಾಣವಾಗುತ್ತಿದ್ದು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ, ಇದರಿಂದ ಜಿಲ್ಲೆಯ ಹಾಗೂ ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ಒಕ್ಕಲೆಬ್ಬಿಸದೇ ಅವರೊಂದಿಗೆ ಸಮನ್ವಯ ಸಾಧಿಸಿಕೊಂಡು ಯೋಜನೆಯನ್ನು ಅನುಷ್ಠಾನ ಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮೀನುಗಾರಿಕಾ ಸಚಿವ ಎಸ್ ಅಂಗಾರ, ಸಂಸದ ಅನಂತ ಕುಮಾರ ಹೆಗಡೆ, ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ವಿವಿಧ ಜನಪ್ರತಿನಿಗಳು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version