Important
Trending

ಕುಮಟಾ ಸಂಪೂರ್ಣ ಸ್ತಬ್ಧ ಲಾಕ್‍ಡೌನ್ ಯಶಸ್ವಿ

ಕುಮಟಾ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಕಫ್ರ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್‍ಡೌನ್‍ನನ್ನು ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಘೋಶಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ ಆಗಿದೆ. ಅದರಂತೆಯೆ ಕುಮಟಾದಲ್ಲಿಯೂ ಕೂಡ ಕಫ್ರ್ಯೂಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದ್ದರಿಂದ ಕುಮಟಾ ಪಟ್ಟಣದ ರಸ್ತೆಗಳು ಜನರ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಸಂಚರಿಸುವ ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ ವಾಹನಗಳನ್ನು ಜಪ್ತಿ ಮಾಡುವುದಾಗಿಯೂ ಪೊಲೀಸರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾವುದೇ ವಾಹನಗಳು ಇಂದು ರಸ್ತೆಗೆ ಇಳಿಯಲಿಲ್ಲ. ಆದರೆ ಕೆಲವು ತುರ್ತು ಸೇವೆಗಳಿಗಾಗಿ ಮಾತ್ರ ವಾಹನವನ್ನು ಸಂಚರಿಸಲು ಪೊಲೀಸರು ಅನುಮತಿ ನೀಡಿದ್ದರು. ರಾಜ್ಯದಲ್ಲಿ 4ನೇ ಹಂತದ ಲಾಕ್‍ಡೌನ್ ಜಾರಿಯಲ್ಲಿ ಪ್ರತಿ ಭಾನುವಾರ ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಹೀಗಾಗಿ ಶನಿವಾರ ಸಂಜೆ 7ರಿಂದ ಸೋಮವಾರ ಬೆಳಗ್ಗಿನವರೆಗೆ ಸಂಪೂರ್ಣ ನಿರ್ಭಂಧವಿರುತ್ತದೆ. ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವುದೇ ಸೇವೆ ಲಭ್ಯವಿರುವುದಿಲ್ಲ ಮದ್ಯ ಮಾರಾಟ ಸಂಪೂರ್ಣ ಬಂದ್ ಇರಲಿದ್ದು, ಔಷಧ ಅಂಗಡಿ, ಆಸ್ಪತ್ರೆ, ಪತ್ರಿಕೆ ವಿತರಣೆಗೆ ವಿನಾಯಿತಿ ನೀಡಲಾಗಿದ್ದು ದಿನಸಿ, ಹಾಲು, ಹಣ್ಣು-ತರಕಾರಿ, ಮಾಂಸ, ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆಯಾದರೂ ಪಟ್ಟಣದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಂತೆ ಕಾಣುತ್ತಿರಲಿಲ್ಲ. ಕುಮಟಾದ ಹಲವೆಡೆ ಜನರು ಸಂಚರಿಸುತ್ತಿರುವುದನ್ನ ಮನಗಂಡ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ, ವಾಪಸ್ಸು ಕಳುಹಿಸುತ್ತಿರುವ ದ್ರಶ್ಯಗಳು ಅಲ್ಲಲ್ಲಿ ಗೋಚರಿಸುತ್ತಿದ್ದವು. ಬೆಳಿಗ್ಗೆಯಿಂದಲೇ ಪೊಲೀಸರು ತಾಲೂಕಿನ ಎಲ್ಲಾ ಹಳ್ಳಿಗಳಿಗೆ ತೆರಳಿ ಸುಕಾಸುಮ್ಮನೆ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿ, ಭಾನುವಾರ ಕಫ್ರ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್‍ಡೌನ್‍ನ ಬಗ್ಗೆ ತಿಳಿಸಿ ರಸ್ತೆಯಲ್ಲಿ ಒಡಾಡದಂತೆ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಮುಖ್ಯಮಂತ್ರಿಗಳು ಘೋಶಿಸಿರುವ ಪ್ರತಿ ಭಾನುವಾರ ಕಫ್ರ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್‍ಡೌನ್‍ಗೆ ಕುಮಟಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರೋನಾ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಿನ ಜನರು ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ

Back to top button