ಬರಿದಾಗಿದ್ದ ಕೋಕ್ತಿ ಕೆರೆಗೆ ಮರು ಜೀವ

ಹೂಳು ತುಂಬಿ ಅವಸಾನದ ಅಂಚಿನಲ್ಲಿದ್ದ ಕೆರೆ
ಪ್ರವಾಸಿ ತಾಣವನ್ನಾಗಿಸಲು ಸಜ್ಜಾದ ಶಾಸಕರು
ಸುನೀಲ ನಾಯ್ಕ ಅವರಿಗೆ ಸ್ಥಳೀಯರಿಂದ ಅಭಿನಂದನೆ

ಭಟ್ಕಳ: ತಾಲೂಕಿನ ಪುರಸಭೆ ವ್ಯಾಪ್ತಿಯ ಪ್ರಮುಖ ಐತಿಹಾಸಿಕ ಹಿನ್ನೆಲೆಯುಳ್ಳ ಕೋಕ್ತಿ ಕೆರೆಗೆ ಅದೆಷ್ಟೋ ಶಾಸಕರು ಅಭಿವೃದ್ಧಿಯ ಜಪ ಮಾಡಿ ಅತ್ತ ಕಡೆ ನೋಡದೇ ಇರುವ ಸಂಧರ್ಭದಲ್ಲಿ ಇದೀಗ ಸ್ಥಳೀಯರ ಮನವಿಗೆ ಒಂದು ಸ್ಪಂದನೆ ಸಿಕ್ಕಿದೆ. ಶಾಸಕ ಸುನೀಲ ನಾಯ್ಕ ಬರಿದಾಗಿದ್ದ ಕೋಕ್ತಿ ಕೆರೆಯ ಹೂಳೆತ್ತುವ ಮತ್ತು ಸೈಡ್ ಪಿಚ್ಚಿಂಗ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಇದರ ಅಭಿವೃದ್ಧಿಗೆ ಹಪಹಪಿಸುತ್ತಿದ್ದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ.
ಮಾಜಿ ಶಾಸಕರು ಹಾಗೂ ಸರಳತೆಯ ಪ್ರತಿರೂಪವಾದ ಡಾ. ಯು ಚಿತ್ತರಂಜನ್ ಅವರ ಅವಧಿಯಲ್ಲಿ ಅವರು ಕಂಡ ಕನಸಿನಲ್ಲಿ ಈ ಕೋಕ್ತಿ ಕೆರೆಯ ಅಭಿವೃದ್ಧಿಯೂ ಒಂದಾಗಿದ್ದು, ಅಲ್ಲಿಂದ ಇಲ್ಲಿಯ ತನಕ ಎಲ್ಲ ಶಾಸಕರ ಪ್ರಯತ್ನ ನಡೆದಿದ್ದು ಸರಕಾರದಿಂದ ಅನುದಾನ ಬಿಡುಗಡೆಗೆ ಆಗಿಲ್ಲವಾಗಿತ್ತು. ಕಣ್ಣ ಮುಂದೆಯೇ ಸಾಕಷ್ಟು ವರ್ಷ ತಾಲೂಕಿನ ಜನರಿಗೆ ಜೀವ ನದಿಯಾಗಿದ್ದ ಕೋಕ್ತಿ ಕೆರೆಯಲ್ಲಿ ಹೂಳು ತುಂಬಿ ನೀರಿನ ಹರಿವಿಲ್ಲದೇ ಅವನತಿಯ ಅಂಚಿಗೆ ತಲುಪಿತ್ತು. ಈ ಬಗ್ಗೆ ಸಾಕಷ್ಟು ವರ್ಷಗಳ ಹೋರಾಟ ಜಾರಿಯಲ್ಲಿದ್ದು ಸಾರ್ವಜನಿಕರು, ಪದೇ ಪದೇ ಜನಪ್ರತಿನಿಧಿಗಳ ಬೆನ್ನು ಬಿದ್ದು ಕೆರೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಬೇಸತ್ತಿದ್ದರು. ಈ ವೇಳೆ ಈ ಬಾರಿ ಆಯ್ಕೆಯಾದ ಶಾಸಕ ಸುನೀಲ ನಾಯ್ಕ ಅವರು ತಮ್ಮ ಅವಧಿಯಲ್ಲಿ ಸತತ ಪ್ರಯತ್ನದಿಂದಾಗಿ ಕೋಕ್ತಿ ಕೆರೆಯ ಅಭಿವೃದ್ದಿಗೆ ಒಂದು ಹಂತದಲ್ಲಿ ಚಾಲನೆ ನೀಡಿದ್ದು ಕೆರೆಯಲ್ಲಿನ ಹೂಳು ಎತ್ತುವುದು ಹಾಗೂ ಸೈಡ್ ಪಿಚ್ಚಿಂಗ್ ನಿರ್ಮಾಣ ಕಾಮಗಾರಿಗೆ ಆರಂಭಿಸಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಇಲ್ಲಿನ ಕೋಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಕೆರೆಯ ಕಾಮಗಾರಿಯ ರೂಪುರೇಷೆಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಮೊದಲ ಹಂತದಲ್ಲಿ 25 ಲಕ್ಷ ಬಿಡುಗಡೆ

ಕಾಮಗಾರಿಗೆ ಒಟ್ಟು 25 ಲಕ್ಷ ರೂ. ಅನುದಾನ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನದಲ್ಲಿ ಹಂತ ಹಂತವಾಗಿ ಸರಕಾರದಿಂದ ಅನುದಾನ ತಂದು ಕೆರೆಯ ಅಭಿವೃದ್ದಿ ಜೊತೆಗೆ ಪ್ರವಾಸಿ ತಾಣವನ್ನಾಗಿ ಇದನ್ನು ಮಾರ್ಪಡಿಸುವ ಕಾರ್ಯ ಮಾಡುವುದಾಗಿ ಸ್ಥಳಿಯರಿಗೆ ಶಾಸಕ ಸುನೀಲ ನಾಯ್ಕ ಭರವಸೆ ನೀಡಿದ್ದಾರೆ.

ಇಲ್ಲಿನ ತನಕ ಇಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಕನಿಷ್ಟ ಪಕ್ಷ ಕೆರೆಯ ಹೂಳು ಎತ್ತುವ ಕಾರ್ಯಕ್ಕೆ ಮುಂದಾಗಿಲ್ಲದರ ನಡುವೆ ಶಾಸಕ ಸುನೀಲ ನಾಯ್ಕ 25 ಲಕ್ಷ ರೂ. ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿಯ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲೂ ಸೂಚನೆ ನೀಡಿರುವದು ಸ್ಥಳಿಯರಲ್ಲಿ ಒಂದು ವಿಶ್ವಾಸ ಮೂಡಿದೆ. ಇಲ್ಲಿನ ಸ್ಥಳಿಯ ನಿವಾಸಿ ಬೆಂಗಳುರಿನಲ್ಲಿ ಇಂಜಿನಿಯರ ಆಗಿ ಕೆಲಸ ಮಾಡುತ್ತಿರುವ ನಾಗರಾಜ ನಾಯ್ಕ ಎಂಬುವವರು ತಮ್ಮದೇ ಕಲ್ಪನೆಯಲ್ಲಿ ಕೋಕ್ತಿ ಕೆರೆಯ ಸ್ಯಾಟಲೈಟ್ ಚಿತ್ರ ಬಳಸಿ ಕಂಪ್ಯೂಟರಾಧಾರಿತವಾಗಿ ಕೆರೆಯ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ನೀಲಿ ನಕ್ಷೆಯನ್ನು ತಯಾರಿಸಿದ್ದಾರೆ. ಈ ಮಾದರಿಯಲ್ಲಿ ಸ್ಥಳಿಯರು ಸಹ ಕೆರೆಯ ಅಭಿವೃದ್ಧಿಗೆ ಈ ಬಾರಿ ಪಣ ತೊಟ್ಟಿದ್ದಾರೆ.


’40 ವರ್ಷಕ್ಕೂ ಅಧಿಕ ಕಾಲದಿಂದ ಕೆರೆಯ ಅಭಿವೃದ್ಧಿಗೆ ಸ್ಥಳಿಯರಿಂದ ನಾನಾ ರೀತಿಯ ಹೋರಾಟ ನಡೆಯುತ್ತಿದ್ದು ಸದ್ಯಕ್ಕೆ ಇದಕ್ಕೆ ಶಾಸಕ ಸುನೀಲ ನಾಯ್ಕ ಅವರು ಆರಂಭಿಕವಾಗಿ ಕಾಮಗಾರಿಯ ಜವಾಬ್ದಾರಿ ಹೊತ್ತು ಅನುದಾನವನ್ನು ಸರಕಾರದಿಂದ ತಂದಿದ್ದಾರೆ. ಸದ್ಯ ಕೆರೆಯ ಒತ್ತುವರಿಯನ್ನು ಸಮರ್ಪಕ ರೀತಿಯಲ್ಲಿ ಸರ್ವೇ ಮಾಡಿ ಹೂಳೆತ್ತುವ ಕಾರ್ಯ ಶೀಘ್ರ ಮಾಡಿದಲ್ಲಿ ಎಲ್ಲರಿಗೂ ಅನೂಕೂಲವಾಗಲಿದೆ.

– ನಾಗರಾಜ ನಾಯ್ಕ- ಸ್ಥಳಿಯ ನಿವಾಸಿ.

ಮಾಜಿ ಶಾಸಕ ಡಾ. ಚಿತ್ತರಂಜನ ಅವರ ಕಾಲದಿಂದಲೂ ಈ ಕೆರೆ ಸುದ್ದಿಯಲ್ಲಿದ್ದು, ಅಂದಿನ ಹೋರಾಟಕ್ಕೆ ಈಗ ಸ್ಥಳಿಯರು ಸಂತಸ ಪಡುವಂತಾಗಿದೆ. ಇದರ ಜೊತೆಗೆ ಪ್ರವಾಸೋದ್ಯಮ, ವಾಕಿಂಗ್ ಸ್ಟ್ರೀಟ್ ಸೇರಿದಂತೆ ಪ್ರವಾಸಿಗರಿಗೆ, ಸ್ಥಳೀಯರಿಗೆ ಅನೂಕೂಲವಾಗುವಂತೆ ಅಭಿವೃದ್ಧಿ ಪಡಿಸಬೇಕಿದೆ.

– ಪ್ರಶಾಂತ ನಾಯ್ಕ- ಸ್ಥಳೀಯರು

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]
Exit mobile version