ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸಿದ್ದಾಪುರದ ವಾಜಪೇಯಿ ನಗರದಲ್ಲಿ ಸ್ವಚ್ಛತಾ ಅಭಿಯಾನ

ಸಿದ್ದಾಪುರ: ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟ ಫಲದಿಂದ, ಅವರ ಮುಂದಾಳತ್ವದಲ್ಲಿ  ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ನಾವೆಲ್ಲ ಈ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅದರ ಮೂಲ ಕಾರಣಿಕರ್ತರು ಗಾಂಧೀಜಿ ಎಂಬುದನ್ನು ನಾವು ಮರೆಯಬಾರದು. ದೇಶದ ಪ್ರಧಾನಮಂತ್ರಿ ಅಥವಾ ರಾಷ್ಟ್ರಪತಿಯಾಗಿ ಅಧಿಕಾರವನ್ನು ಅನುಭವಿಸಬೇಕು ಎಂದು ಅವರು ತಮ್ಮ ಹೋರಾಟ ನಡೆಸಿರಲಿಲ್ಲ.ಅಂತಹ ಯಾವುದೇ ಆಸೆಯನ್ನು ಅವರು ಇಟ್ಟುಕೊಳ್ಳದೇ ಬ್ರಿಟಿಷರನ್ನು ಭಾರತದಿಂದ ತೊಲಗಿಸುವುದಷ್ಟೆ ಅವರ ಹೋರಾಟದ ಉದ್ದೇಶವಾಗಿತ್ತು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ ಜಿ ನಾಯ್ಕ ಹಣಜೀಬೈಲ್ ಅವರು ಹೇಳಿದರು.

ಅವರು ಬಿಜೆಪಿ ಮಂಡಲದ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಪಟ್ಟಣದ ವಾಜಪೇಯಿ ನಗರದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿ ಬಳಿಕ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. 

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರ ನಾಯಕತ್ವದಲ್ಲಿ ದೇಶಕ್ಕೆ ಆಗಸ್ಟ್ 15, 1947  ರಂದು ಸ್ವಾತಂತ್ರ್ಯ ದೊರಕಿತು. ಅವರು ಯಾವುದೇ ಅಧಿಕಾರವನ್ನು ಪಡೆಯದೇ ಇರಬಹುದು ಆದರೆ ಅವರ ನಾಯಕತ್ವದ ಪರಿಣಾಮ ಅವರ ಜೊತೆಯಲ್ಲಿ ಹಲವು ಸ್ವಾತಂತ್ರ್ಯ ಹೋರಾಟಗಾರರು   ಬ್ರಿಟಿಷರನ್ನು ಈ ದೇಶದಿಂದ ಓಡಿಸಿ ನಮಗೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಗಾಂಧೀಜಿ ಅವರು ಸರಳ ಜೀವನ ನಡೆಯುತ್ತಿದ್ದರು ಅವರು ತಮ್ಮ ಪೂರ್ಣ ಜೀವನವನ್ನು  ದೇಶದ ಸೇವೆಗೆ ಮುಡುಪಾಗಿಟ್ಟಿದ್ದರು. 

ದೇಶದ ಎರಡನೇ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಒಬ್ಬ ಮಹಾನ್ ನಾಯಕ. ಇವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇವರು ದೇಶಕ್ಕೆ ನೀಡಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 17ರಿಂದ ಬಿಜೆಪಿ ಪಕ್ಷವು  ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಡಿಯಲ್ಲಿ ಹಲವು ಸೇವಾ ಚಟುವಟಿಕೆಗಳನ್ನು ಕೈಗೊಂಡಿದೆ ಅದರ ಭಾಗವಾಗಿ  ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ತಾಲೂಕ ಬಿಜೆಪಿ ಹಲವು ಕಡೆಗಳಲ್ಲಿ ಸ್ವಚ್ಛತೆಯನ್ನು ಮಾಡುವ ಮೂಲಕ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಸ್ವಚ್ಛತಾ ಅಭಿಯಾನ ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ನಾಗರಿಕರಿಗೆ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ ಮಹಾತ್ಮ ಗಾಂಧಿಯವರು ಈ ದೇಶಕ್ಕೆ ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಮಹಾತ್ಮ ಗಾಂಧಿ ಜಯಂತಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆಗಷ್ಟೇ ಸೀಮಿತವಾಗಬಾರದು. ಅವರ ಆದರ್ಶ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸುವಂತಾಗಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ದೇಶಕಂಡ ಹೆಮ್ಮೆಯ ಪ್ರಧಾನಮಂತ್ರಿ. ಅವರ ಅಧಿಕಾರ ಅವಧಿಯಲ್ಲಿ ದೇಶದಲ್ಲಿ ಆಂತರಿಕ ಭದ್ರತೆ, ಆರ್ಥಿಕ ಸಮಸ್ಯೆಯಂಥ ಹಲವು ಸಮಸ್ಯೆ ಇದ್ದರೂ ಇವೆಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಕೇವಲ 17 ತಿಂಗಳು ಅಧಿಕಾರದಲ್ಲಿದ್ದರು ಸಹ ದೇಶದ ಜನತೆ  ಮರೆಯದೇ ಇರುವಂತ ಕೊಡುಗೆಯನ್ನು ನೀಡಿದ್ದಾರೆ.

ಸಿದ್ದಾಪುರ ಮಂಡಲದ 26 ಶಕ್ತಿಕೇಂದ್ರದ 117 ಬೂತ್  ಗಳಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಣೆ ಮಾಡಲು ಹಾಗೂ ಅದರ ಜೊತೆ ಸ್ವಚ್ಛತೆಯನ್ನು ಮಾಡಲು ನಿರ್ದೇಶನ ನೀಡಲಾಗಿದೆ. ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ಹಾಗೂ ಖಾದಿ ಉತ್ಪನ್ನಗಳನ್ನು ಉತ್ತೇಜನ ನೀಡುವ ದೃಷ್ಟಿಯಿಂದ ನಾವೆಲ್ಲ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ನಾವೆಲ್ಲ ಪ್ರಧಾನಿಯವರ ಆತ್ಮ ನಿರ್ಭರ ಭಾರತ ಕನಸನ್ನು ಸಾಕಾರಗೊಳಿಸುವ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಕೆ ಮೇಸ್ತ, ಪ್ರಸನ್ನ ಹೆಗಡೆ, ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ ನಾಯ್ಕ,  ಪ.ಪಂಚಾಯತ ಸದಸ್ಯರಾದ ನಂದನ್ ಬೋರ್ಕರ್, ವೆಂಕೋಬ, ರಾಧಿಕಾ ಕಾನಗೋಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್, ಪ್ರ. ಕಾರ್ಯದರ್ಶಿ ಫಾತಿಮಾ ಸಾಬ್, ಭವಾನಿ ಅಂಬಿಗ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ವಿಕ್ಕಿ ಫೆರ್ನಾಂಡಿಸ್, ಪ್ರ. ಕಾರ್ಯದರ್ಶಿ ರಫೀಕ್ ಸಾಬ್,  ಪ್ರಮುಖರಾದ ಸುರೇಶ ನಾಯ್ಕ, ಸತೀಶ ಕಾಮತ, ಗಣೇಶ ಮೇಸ್ತ, ರಾಘವೇಂದ್ರ ರಾಯ್ಕರ್, ಶಿವಕುಮಾರ್ ನಾಯ್ಕ, ಮಂಜು ಆಚಾರಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತ ಎಸ್. ಕೆ ಮೇಸ್ತ ಮಾಡಿದರು. ಕಾರ್ಯಕ್ರಮದ ಸಂಚಾಲಕ ಮಹಾಬಲೇಶ್ವರ ಹೆಗಡೆ ವಂದಿಸಿದರು.

Exit mobile version