ರಾಜ್ಯಮಟ್ಟದ Rank ವಿಜೇತರು ಹಾಗೂ ಸಾಧಕರಿಗೆ ಸನ್ಮಾನ

ಹೊನ್ನಾವರ: ತಾಲೂಕಿನ ಗೇರಸಪ್ಪಾದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ವಿಜೇತರು ಹಾಗೂ ಇನ್ನಿತರ ಪ್ರತಿಭಾನ್ವಿತರನ್ನು ಆತ್ಮೀಯವಾಗಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ಇಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿ ಸಾಧನೆ ಮಾಡಿದ ರಾಜ್ಯ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಭೂಮಿಕಾ ಕೃಷ್ಣ ನಾಯ್ಕ, ನಾಲ್ಕನೆಯ ಸ್ಥಾನ ಪಡೆದ ದೀಕ್ಷಿತಾ ಮಾದೇವ ನಾಯ್ಕ, ಏಳನೆಯ ಸ್ಥಾನ ಪಡೆದ ಕಾವ್ಯಾ ನಾಗರಾಜ ನಾಯ್ಕ, ಎಂಟನೆಯ ಸ್ಥಾನ ಪಡೆದ ವನಿತಾ ಗಜಾನನ ನಾಯ್ಕ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಾಬು ಎಲ್ ನಾಯ್ಕ ಇವರುಗಳನ್ನು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ನಗರಬಸ್ತಿಕೇರಿ ಗ್ರಾ. ಪಂ ಅಧ್ಯಕ್ಷ ಮಂಜುನಾಥ ಎಮ್ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ಮಹೇಶ ಎಂ ನಾಯ್ಕ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಹೆಗಡೆ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನೊಡಗೂಡಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಬ್ರಹ್ಮಾಕುಮಾರ, ರಾಜಯೋಗಿ ಬಿ.ಕೆ ಹಳೆಮನೆಯವರು ಸನ್ಮಾನಕ್ಕೆ ಅರ್ಹರಾದ ಪ್ರತಿಭಾನ್ವಿತರು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಇತರರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕವೃಂದದವರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ, ಬಿ.ಕೆ ಕುಸುಮಾಜೀ ಕಾರ್ಯಕ್ರಮ ನಿರ್ವಹಿಸಿದರು. ಬಿ.ಕೆ ಚೇತನಾ, ಬಿ.ಕೆ ಸುನಂದಾ, ಬಿ.ಕೆ ಮಹಾದೇವಿ, ಬಿ.ಕೆ ಪುಷ್ಪಾ, ಬಿ.ಕೆ ಶಿಲ್ಪಾ, ಬಿ.ಕೆ ಸಾವಿತ್ರಿ ಸಹಕರಿಸಿದರು.

Exit mobile version