ಹೊನ್ನಾವರ: ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ನಿಷ್ಠಾ 3.0 ತರಬೇತಿಯನ್ನು ಬಹಿಸ್ಕರಿಸುವ ಕುರಿತು ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಶಿಕ್ಷಣಾಧಿಕಾರಿಗಳ ಮೂಲಕ ಬೆಂಗಳೂರು ಡಿ.ಎಸ್.ಇ.ಆರ್.ಟಿ. ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ ಮಾತನಾಡಿ, 2017ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾ ನಿರತ ಪದವೀದರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯದ ಬಗ್ಗೆ ಈಗಾಗಲೇ ಹಲವು ಬಾರಿ ತಾಲೂಕು, ಜಿಲ್ಲಾ, ರಾಜ್ಯ ಹಂತದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮನವಿ ನೀಡಿ ಹಕ್ಕೊತ್ತಾಯ ಮಾಡಿದೆ.
ಜೂನ್ 2021 ರಲ್ಲಿ ಸಂಘವು ಪುನಃ ಮನವಿ ನೀಡಿ ಮೂರು ತಿಂಗಳ ಕಾಲಮಿತಿಯೊಳಗೆ ಪರಿಹರಿಸಲು ವಿನಂತಿಸಲಾಗಿತ್ತು. ಆದರೆ ಯಾವುದೇ ಬದಲಾವಣೆಯಾಗಲಿ, ಸಮಸ್ಯೆಗೆ ಪರಿಹಾರವಾಗಲಿ ದೊರೆತಿಲ್ಲ. ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವವರೆಗೆ ನಿಷ್ಠಾ 3.0 ತರಬೇತಿಯಲ್ಲಿ ಲಾಗಿನ್ ಆಗದೇ ಪ್ರತಿಯೊಬ್ಬ ಶಿಕ್ಷಕರು ತರಬೇತಿಯನ್ನು ಬಹಿಸ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ|| ಸವಿತಾ ನಾಯಕ ಮತ್ತು ಸಮನ್ವಯಾಧಿಕಾರಿಗಳಾದ ಶ್ರೀ ಎಸ್. ಎಮ್. ಹೆಗಡೆ ಮನವಿ ಸ್ವೀಕರಿಸಿದರು. ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎಮ್. ಹೆಗಡೆ ಮನವಿ ಓದಿದರು. ಈ ಸಂದರ್ಭದಲ್ಲಿ ಸಂಘದ ವಿವಿಧ ಪದಾದಿಕಾರಿಗಳಾದ ಸುದೀಶ್ ನಾಯ್ಕ, ಸುರೇಶ್ ನಾಯ್ಕ, ಶಾರದಾ ಹೆಗಡೆ, ಸಾಧನಾ ಬರ್ಗಿ, ಪ್ರತಿಮಾ ಹೆಗಡೆ, ಸುನಂದಾ ಭಟ್, ಯೋಗೀಶ್ ನಾಯ್ಕ, ಮೋಹನ್ ನಾಯ್ಕ, ಪ್ರಶಾಂತ್ ಭಟ್, ಅಣ್ಣಪ್ಪ ನಾಯ್ಕ, ಎಮ್. ಎನ್. ಗೌಡ, ಕಲ್ಪನಾ ಹೆಗಡೆ ಮತ್ತು ಇತರರು ಹಾಜರಿದ್ದರು.