ವಾಯವ್ಯ ಸಾರಿಗೆಯಲ್ಲಿ ಹೆಸರೇ ವಿಭಾಗ? ಅಂಕೋಲಾ ಬಸ್ ನಿಲ್ದಾಣ ಕಂಡಿತೇ ಉದ್ಘಾಟನೆ ಭಾಗ್ಯ ?

ಅಂಕೋಲಾ ಅ. 14 : ಅಂಕೋಲಾದಲ್ಲಿ ಬಹುಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿ ಕೊನೆಯ ಹಂತಕ್ಕೆ ಬಂದು ಉದ್ಘಾಟನೆಗಾಗಿ ಕಾಯುತ್ತಿದೆ.

ಗುತ್ತಿಗೆದಾರನ ವಿಳಂಬನೀತಿ ಮತ್ತು ಅಸಡ್ಡೆ,ಸಂಬಂಧಿಸಿದ ಇಲಾಖೆಗಳ ನಿರ್ಲಕ್ಷ ನೀತಿಯಿಂದ ಆರಂಭದಿಂದ ಇಲ್ಲಿಯವರೆಗೆ ಬಸ್ ನಿಲ್ದಾಣ ನಾನಾ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ.

ಅಂತಹುದೇ ಇನ್ನೊಂದು ಘಟನೆಗೆ ಸಾಕ್ಷಿ ಎನ್ನುವಂತೆ,ಅಂಕೋಲಾ ಬಸ್ ನಿಲ್ದಾಣದ ಹೆಸರು ಸೂಚಕ (ನಾಮ ಫಲಕ ) ಬರೆಯಿಸಲಾಗಿದ್ದು, ಅಕ್ಷರ ದೋಷ ಸಂಬಂಧಿಸಿದವರ ಗಮನಕ್ಕೆ ಬಂದಿಲ್ಲವೇ ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಯಾಗಿದೆ.

ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಎನ್ನುವಂತೆ ಕನ್ನಡದಲ್ಲಿಯೇ ದೊಡ್ಡದಾಗಿ ನಾಮಫಲಕ ಬರೆಸುವ ಮೂಲಕ ಇಲಾಖೆ ತನ್ನ ಜವಾಬ್ದಾರಿ ತೋರ್ಪಡಿಸಿದೆಯಾದರೂ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಬರೆಯ ಬೇಕಿದ್ದ ಜಾಗದಲ್ಲಿ ವಾಯುವ್ಯ ಎಂದು ತಪ್ಪಾಗಿ ಬರೆಯಲಾಗಿದೆ.

ಅಕ್ಷರ ಬದಲಾವಣೆಯಲ್ಲಿ ಆದ ಲೋಪದೋಷಗಳ ಬಗ್ಗೆ ವಿವರಿಸಿದ ಹೆಸರು ಹೇಳಲು ಇಚ್ಛಿಸದ ಸ್ಥಳೀಯ ರೊಬ್ಬರ ಪ್ರಕಾರ, ರಾತ್ರಿ ವೇಳೆ ಹೆಸರು ಬರೆಯುತ್ತಿರುವುದನ್ನು ನಾನು ನೋಡಿದ್ದೆ. ಆ ವೇಳೆಗೆ ವಾಯವ್ಯ ಎಂದೇ ಸರಿಯಾಗಿ ಬರೆದಿದ್ದರು. ನಂತರ ಯಾರದೋ ಮಾತು ಕೇಳಿ ಬದಲು ಯು ಎಂದು ಬರೆಸುವ ಮೂಲಕ ವಾಯವ್ಯ ಇದು ವಾಯುವ್ಯ ಎಂದು ತಪ್ಪಾಗಿ ಬರೆಯಲಾಗಿದೆ ಎಂದರು.

ನಿಲ್ದಾಣದಲ್ಲಿ ಬಂದು ಹೋಗುವ ಪ್ರತಿ ಬಸ್ ಮೇಲೆ ಸಾಮಾನ್ಯವಾಗಿ ವಾಯವ್ಯ ಸಾರಿಗೆ ಎಂದು ಎದ್ದು ಕಾಣುವಂತೆ ಬರೆದಿರಲಾಗುತ್ತದೆ.ಸಂಬಂಧಿಸಿದ ವಿವಿಧ ಕಾಗದ ಪತ್ರಗಳಲ್ಲಿಯೂ ವಾಯವ್ಯ ಎಂದು ಸ್ಪಷ್ಠವಾಗಿ ಬರೆದಿರುವುದನ್ನು ಕಾಣಬಹುದಾಗಿದೆ.

ಹೀಗಿದ್ದೂ ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರ ,ಅಕ್ಷರ ಲೋಪಗಳನ್ನು ಗುರುತಿಸದಾದರೇ ಅಥವಾ ಕಣ್ಣಿದ್ದೂ ಕುರುಡಾದರೆ ಅಥವಾ ಈ ಹಿಂದೆ ಕಾಮಗಾರಿ ಮತ್ತಿತರ ನಿರ್ವಹಣೆಯಲ್ಲಿ ತೋರಿದಂತೆ ನಿರ್ಲಕ್ಷವನ್ನು ಮುಂದುವರಿಸಿ ತಾವು ಏನು ಮಾಡಿದರೂ ನಡೆಯುತ್ತದೆ.

ಅಷ್ಟಕ್ಕೂ ನಮ್ಮನ್ನು ಕೇಳುವವರಾರು ? ಎಂದು ಮತ್ತೊಮ್ಮೆ ಅಸಡ್ಡೆ ತೋರಿದರೆ ಎಂಬ ಪ್ರಶ್ನೆಗೆ ಸಂಬಂಧಿಸಿದವರೇ ಉತ್ತರಿಸಬೇಕಿದೆ.

ಸಂಬಂಧಿಸಿದವರು ಇನ್ನು ಮುಂದಾದರೂ ಎಚ್ಚೆತ್ತು ದೃಷ್ಠಿ ದೋಷ ಇಲ್ಲವೇ ಇತರೆ ಕಾರಣಗಳಿಂದ ಆಗಿರಬಹುದಾದ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತಾಗಲಿ. ಈ ವರೆಗೂ ಉದ್ಘಾಟನೆ ಕಾಣದ ಬಸ್ ನಿಲ್ದಾಣ ಶೀಘ್ರವಾಗಿ ಉದ್ಘಾಟನೆ ಗೊಂಡು ಆ ಮೂಲಕವಾದರೂ, ಸ್ವಚ್ಛತೆ, ಶೌಚಾಲಯ ಮತ್ತಿತರ ಪ್ರಯಾಣಿಕ ಸ್ನೇಹಿ ಪೂರಕ ವ್ಯವಸ್ಥೆ ಸುಧಾರಣೆ ಕಂಡು, ಸಾರ್ವಜನಿಕ ಸೇವೆಯ ಮಹತ್ತರ ಜವಾಬ್ದಾರಿ ನಿಭಾಯಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version