ದಾಂಡೇಲಿ: ಇಲ್ಲಿನ ಅಂಬಿಕಾನಗರ ಪಂಚಾಯತ್ ವ್ಯಾಪ್ತಿಯ ಕೆಗದಾಳ ಗ್ರಾಮದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಂದನೆ ನೀಡಿದರು. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಗದಾಳ ಗ್ರಾಮದಲ್ಲಿ ಠಿಕಾಣಿ ಹೂಡುವ ಮೂಲಕ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.
ಗ್ರಾಮಕ್ಕೆ ಆಗಮಿಸಿದ ನಂತರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ಗ್ರಾಮ ಪಂಚಾಯತಿಯ ಸದಸ್ಯರ ಜೊತೆಗೆ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಅರ್ಹ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿ ಪಡೆದು, ಪೂರಕ ಪೌಷ್ಟಿಕ ಆಹಾರದ ಬಗ್ಗೆ ಇಡಲಾದ ಆಹಾರ ಸಾಮಗ್ರಿಗಳ ಪ್ರದರ್ಶನ ವೀಕ್ಷಣೆ ಮಾಡಿದರು.
ಗ್ರ‍್ರಾಮ ಸಂಚಾರ ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರು ನೀಡಿದ ಅಹವಾಲುಗಳನ್ನು ಸ್ವೀಕರಿಸಿದರು. ಲಿಖಿತ ರೂಪದ ಅರ್ಜಿಗಳನ್ನು ಸಹ ಸ್ಥಳದಲ್ಲಿಯೇ ಪಡೆದುಕೊಂಡರು. ಗ್ರಾಮ ಸಂಚಾರದ ನಂತರ ವೇದಿಕೆಯ ಮೇಲೆ ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಬಗೆಹರಿಸಬಹುದಾದಂತಹ ಪರಿಹಾರ ಒದಗಿಸುವ ಕೆಲಸ ಮಾಡಿದರು.
ವಿಸ್ಮಯ ನ್ಯೂಸ್, ದಾಂಡೇಲಿ