Follow Us On

Google News
Info
Trending

ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ಶಿಬಿರ ಉದ್ಘಾಟನೆ

ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ (ರಿ.) ಕುಮಟಾ ಇವರ ಪ್ರಾಯೋಜಕತ್ವದಲ್ಲಿ ಕುಮಟಾ ಗೋರೆಯಲ್ಲಿ ನೂತನವಾಗಿ ಆರಂಭಗೊಂಡಿರುವ, ಆಧುನಿಕ ವಿದ್ಯಾಭ್ಯಾಸದ ಜೊತೆಗೆ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರದ ಹಿನ್ನೆಲೆಯುಳ್ಳ ಗುರುಕುಲ ಮಾದರಿಯ ಶಿಕ್ಷಣವನ್ನು ನೀಡುವ ಉದ್ದೇಶ ಹೊಂದಿರುವ ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 24/10/2021 ರಂದು ಐದು ದಿನಗಳ ಯೋಗ ಶಿಬಿರವನ್ನು ಯೋಗಪಟು ಶ್ರೀ ನಾಗೇಂದ್ರ ಭಟ್ಟ ಆಚವೆ ಇವರು ದೀಪಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಶ್ರೀ ಜಿ ಎನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಯೋಗವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಭಾರತೀಯ ಮೂಲದ ವ್ಯಾಯಾಮ ಮತ್ತು ಆರೋಗ್ಯ ನಿರ್ವಹಣೆಗೆ ಬಹಳ ಪರಿಣಾಮಕಾರಿಯಾದ ಚಟುವಟಿಕೆಯಾಗಿದೆ.  ವೇದ ಸಾಹಿತ್ಯದಲ್ಲಿ ಯೋಗದ  ಉಲ್ಲೇಖವಿದೆ ಮತ್ತು ಶತಮಾನಗಳಿಂದ ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದ ಇತಿಹಾಸವಿದೆ. ಯೋಗದ ವಿವಿಧ ಆಸನಗಳನ್ನು ದೇಹದ ಒಂದು ಅಥವಾ ಹೆಚ್ಚಿನ  ಭಾಗಗಳಿಗೆ ವ್ಯಾಯಾಮವಾಗುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ.

ಯೋಗವನ್ನು ಅಭ್ಯಾಸ ಮಾಡುವವರು ಪ್ರತಿದಿನ ಸರಿಯಾದ ರೀತಿಯಲ್ಲಿ ಮತ್ತು ನಿರ್ದಿಷ್ಟ ಅನುಕ್ರಮದಲ್ಲಿ ಈ ಆಸನಗಳನ್ನು ಅಭ್ಯಯಿಸಬೇಕಾಗುತ್ತದೆ. ಪರಿಣಿತ ಗುರುಗಳ ಅಥವಾ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದು ಸೂಕ್ತ. ನಮ್ಮ ಭಾರತೀಯ ಪರಂಪರೆಯ ಶ್ರೇಷ್ಠ ಕೊಡುಗೆಯಾದ ಯೋಗವು ಜನಮಾನಸದಲ್ಲಿ ಹಾಸುಹೊಕ್ಕಾಗಬೇಕಿದೆ. ಅದರ ಉಪಯೋಗವನ್ನು ನಾವು ನಮ್ಮ ದೇಹದ, ಮನಸ್ಸಿನ ಮೂಲಕ ಜೀವನದ ಸರ್ವತೋಮುಖ ವಿಕಾಸದ ಸಲುವಾಗಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ನಂತರದಲ್ಲಿ ಯೋಗಗುರುಗಳಾದ ಶ್ರೀ ನಾಗೇಂದ್ರ ರವರು ಪ್ರತಿ ವರ್ಷದ ಜೂನ್ 21 ಅನ್ನು ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲಾಗುತ್ತದೆ. ಯೋಗವು ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆ ಸಹಾಯ ಮಾಡುತ್ತದೆ.ಸ್ನಾಯು ಬಲವನ್ನು ಸುಧಾರಿಸುತ್ತದೆ.ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ.ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಹೃದಯ ಬಡಿತವನ್ನು ಉತ್ತಮಗೊಳಿಸುತ್ತದೆ.ಗಮನ ಮತ್ತು ಏಕಾಗ್ರತೆಗೆ ಸಹಾಯ ಮಾಡುತ್ತದೆ ಎಂದು ಯೋಗದ ಮಹತ್ವವನ್ನು ವಿವರಿಸುತ್ತ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಸಹಕಾರಿಯಾಗುವ ಆಸನಗಳನ್ನು, ಮುದ್ರೆಗಳನ್ನು, ಪ್ರಾಣಯಾಮಗಳನ್ನು ಅವುಗಳ ಭಂಗಿ ಹಾಗೂ ಮಹತ್ವಗಳೊಂದಿಗೆ ವಿವರಿಸುತ್ತ ಯೋಗ ಪ್ರಾತ್ಯಕ್ಷಿಕೆಯನ್ನು ಒಂದು ಗಂಟೆಯಷ್ಟು ಸಮಯದಲ್ಲಿ ನೆರವೇರಿಸಿದರು.  ಸಂಸ್ಥೆಯ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Back to top button