ಅಂಕೋಲಾ : ಪುರಸಭೆಯ ಕೆಲವು ವಾರ್ಡಗಳಲ್ಲಿ ಈ ಸ್ವತ್ತು ಕೊಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ, ಫೆಬ್ರವರಿ ಮಾರ್ಚ್ ತಿಂಗಳುಗಳ ಜಮಾ ಖರ್ಚು ವಿವರ ಕೇಳಿದರೆ ಇದುವರೆಗೆ ನೀಡುತ್ತಿಲ್ಲಎಂದು ಆರೋಪಿಸಿ ಪುರಸಭೆ ಸದಸ್ಯ ಮಂಜುನಾಥ ನಾಯ್ಕ, ಅಧ್ಯಕ್ಷರ ವಿರುದ್ಧ ದಿಕ್ಕಾರ ಕೂಗಿದ ಘಟನೆ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಡೆದಿದ್ದು ಈ ಬೆಳವಣಿಗೆಯಿಂದಾಗಿ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಹಾಗೂ ಬಿ.ಜೆ.ಪಿ ಸದಸ್ಯರು ಸಭಾ ತ್ಯಾಗ ಮಾಡಿ ಹೊರ ಹೋಗಿರುವುದಾಗಿ ತಿಳಿದು ಬಂದಿದೆ.
ಕಳೆದ ಸಭೆಯಲ್ಲಿ ಜಮಾ ಖರ್ಚು ವಿವರ ಕೇಳಿದರೆ ಮುಂದಿನ ಸಭೆಯಲ್ಲಿ ನೀಡುವುದಾಗಿ ತಿಳಿಸಲಾಗಿತ್ತು ಈಗ ಸಮಯದ ಅಭಾವದ ಕಾರಣ ನೀಡಿ ಜಮಾ ಖರ್ಚಿನ ವಿವರ ನೀಡಲಾಗಿಲ್ಲ, ಉದ್ದೇಶ ಪೂರ್ವಕವಾಗಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯ ಸಭೆ ಕರೆಯಲಾಗಿದೆ. ಎರಡು ಕಡೆ ಈ ಸ್ವತ್ತು ನೀಡುವಲ್ಲಿ ಭ್ರಷ್ಟಾಚಾರ ನಡೆದಿರುವ ಸಹಾಯವಿದ್ದು ಸಂಬಂಧಿಸಿದ ಕಡತಗಳನ್ನು ಯಾಕೆ ಪರಿಶೀಲಿಸಲು ನೀಡುತ್ತಿಲ್ಲ ಎಂದು ಪುರಸಭೆ ಸದಸ್ಯ ಮಂಜುನಾಥ ನಾಯ್ಕ, ಕಾರ್ತಿಕ ನಾಯ್ಕ ಸಭೆಯಲ್ಲಿ ಪ್ರಶ್ನಿಸಿ ಆಡಳಿತ ಪದ್ಧತಿಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.
ರಾಜ್ಯದ ಎಲ್ಲಾ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳ ಸಾಮಾನ್ಯ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಲಾಗುತ್ತಿದೆ ಅಂಕೋಲಾದಲ್ಲಿ ಮಾತ್ರ ಪತ್ರಕರ್ತರಿಗೆ ಮಾಹಿತಿ ನೀಡದೆ ಸಭೆ ನಡೆಸಲಾಗುತ್ತಿದೆ ಹಾಗಾಗಿ ನಾವು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಸಹಕಾರ ಕೋರಿ, ಇಲ್ಲಿಯ ಅವ್ಯವಸ್ಥೆ ವಿರುದ್ಧ ಸಾರ್ವಜನಿಕರ ಗಮನಸೆಳೆಯುವ ಅನಿವಾರ್ಯತೆ ಉಂಟಾಗಿದೆ ಎಂದು ಮಂಜುನಾಥ ನಾಯ್ಕ ತಿಳಿಸಿದ್ದಾರೆ.
ಈ ಸ್ವತ್ತು ವಿಚಾರದಲ್ಲಿ, ಒಂದಿಬ್ಬರು ಕಾಂಗ್ರೆಸ್ ಪಕ್ಷದ ಸದಸ್ಯರು,ಪುರಸಭೆ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಸಮಂಜಸ ಉತ್ತರ ನೀಡುವಂತೆ ಆಗ್ರಹಿಸುತ್ತಿದ್ದ ವೇಳೆ,ಕಾಂಗ್ರೆಸ್ ನಿಂದಲೇ ಆಯ್ಕೆಯಾಗಿದ್ದ ವಿಶ್ವನಾಥ್ ಟಿ ನಾಯ್ಕ ತನ್ನ ಪಕ್ಷದ ಸದಸ್ಯರಿಗೆ ನೀವು ಯಾವ ವಾರ್ಡ್ ನ ಈ ಸ್ವತ್ತು ವಿಚಾರ ಮಾಲಾಡುತ್ತಿದ್ದೀರಿ, ನಿಮ್ಮ ನಿಮ್ಮ ವಾರ್ಡ್ ವಿಷಯ ಮಾತ್ರ ಪ್ರಸ್ತಾಪಿಸಿ ಎಂದಾಗ ಮಹಿಳಾ ಸದಸ್ಯರೊಬ್ಬರೂ ಅದಕ್ಕೆ ಧ್ವನಿಗೂಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ ನಾಯ್ಕ ಹಾಗೂ ಮಂಜುನಾಥ ನಾಯ್ಕ,ನಾವು ಸಾರ್ವಜನಿಕರ ಪರವಾಗಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ ವಿನಃ ಇದರಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಇಲ್ಲಾ . ಬೇಕಾದರೆ ನೀವು ನಮ್ಮ ಹಾಗೂ ಇತರ ವಾರ್ಡ್ಗಳ ಮಾಹಿತಿ ಕೇಳಿ ಎಂದಾಗ ಪರಸ್ಪರರಲ್ಲಿ ಚರ್ಚೆ ಕಾವೇರಿದಂತೆ ಕಂಡುಬಂತು.
ಆ ವಿಷಯ ಅಷ್ಟಕ್ಕೇ ಸೀಮಿತವಾಯಿತಾದರೂ ನಂತರ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಾ ನಾಯ್ಕ ಹಾಗೂ ಮಂಜುನಾಥ ನಾಯ್ಕ ನಡುವೆ ವಿಡಿಯೋ / ವೈಯಕ್ತಿಕ ವಿಚಾರಗಳ ಮಾತು ಕೇಳಿ ಬಂದವು . ಅಂತೆಯೇ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಬಳಿ ಮಾಹಿತಿ ಒದಗಿಸುವಂತೆ ಪಟ್ಟು ಹಿಡಿದ ಮಂಜುನಾಥ ನಾಯ್ಕ, ಅಧ್ಯಕ್ಷರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಧಿಕ್ಕಾರ ಕೂಗಿದರು.
ಸದಸ್ಯರ ಈ ವರ್ತನೆಯಿಂದ ಅಧ್ಯಕ್ಷರು ಮತ್ತು ಕೆಲ ಸದಸ್ಯರು ಸಭೆಯಿಂದ ಎದ್ದು ಹೊರನಡೆದರು. ನಂತರ ಅಧ್ಯಕ್ಷರು ತಮ್ಮ ಕೊಠಡಿಯಲ್ಲಿ ಇತರೆ ಸದಸ್ಯ ಜೊತೆ ಮಾತುಕತೆ ನಡೆಯುತ್ತಿದ್ದ ವೇಳೆ, ಅಧ್ಯಕ್ಷರ ಪತಿ ಇರುವುದನ್ನು ನೋಡಿದ ಮಂಜುನಾಥ ನಾಯ್ಕ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದಾಗ,ಅದನ್ನು ಗಮನಕ್ಕೆ ಬರುತ್ತಿದ್ದಂತೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಅವರ ಪತಿ ಅರುಣ ನಾಡಕರ್ಣಿ ಹಾಗೂ ಮಂಜುನಾಥ ನಾಯ್ಕ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ,ಪುರಸಭೆಯ ಸಾಮಾನ್ಯ ಸಭೆಯ ದಿನ ಮಂಜುನಾಥ ನಾಯ್ಕ ಅವರು ನೀಡಿರುವ ಹೇಳಿಕೆಗಳ ವಿಡಿಯೋ ದೃಶ್ಯಾವಳಿಗಳ ಮೂಲಕ, ಮರಸಭೆಯಲ್ಲಿ ನಡೆದ ಬಹುತೇಕ ಘಟನೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಚರ್ಚೆಗೆ ಗ್ರಾಸವಾಗಿದೆ.
ಆರಂಭದಿಂದ ಈವರೆಗೆ ಅಂಕೋಲಾ ಪುರಸಭೆಯಲ್ಲಿ ನಾನಾರೀತಿಯ ,ಆರೋಪ-ಪ್ರತ್ಯಾರೋಪ, ಪ್ರತಿಭಟನೆ ನಡೆದಿದ್ದು, ಇಂದಿನ ಘಟನೆ ಮತ್ತಷ್ಟು ರಾಜಕೀಯ ಕಚ್ಚಾಟಗಳಿಗೆ ತೆರೆದುಕೊಳ್ಳಲಿದೆ ಎಂಬ ಮಾತು ಕೇಳಿಬರುತ್ತಿದೆ. ಆಡಳಿತ ಪಕ್ಷವೇ ಇರಲಿ – ವಿಪಕ್ಷವೇ ಇರಲಿ ತಮ್ಮ ಇತಿಮಿತಿ ಅರಿತು,ಅಭಿವೃದ್ಧಿ ದೃಷ್ಟಿಯಿಂದ ಕೂಡಿಕೊಂಡು ಆಡಳಿತ ನಡೆಸಬೇಕೆ ವಿನ: ,ಪರಸ್ಪರ ಕೆಸರೆರಚಾಟದಲ್ಲಿಯೇ ಕಾಲ ಕಳೆಯದೇ,ಹಾಳುಗೆಟ್ಟ ರಸ್ತೆ, ವ್ಯವಸ್ಥಿತ ಚರಂಡಿ,ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕೈಜೋಡಿಸಬೇಕು.. ಅಂತೆಯೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಹ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದೆ,ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ