Big News
Trending

ಸರ್ವಸ್ವವನ್ನೂ ತ್ಯಾಗ ಮಾಡಿದ ತಂದೆಯನ್ನೇ ಬೀದಿಪಾಲು ಮಾಡಿದ ಮಗ: ರಸ್ತೆಯಲ್ಲಿ ಭಿಕ್ಷೆ ಬೇಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಅಪ್ಪ

ಎಂತಹ ವಿಚಿತ್ರ ನೋಡಿ. ಸಾಕಿ ಸಾಲುಹಿ, ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ದೊಡ್ಡವರನ್ನಾಗಿ ಮಾಡಿದ ತಂದೆಯನ್ನೇ ಈ ಮಕ್ಕಳು ಬೀದಿ ಪಾಲು ಮಾಡಿದ್ದಾರೆ. ಈಗ ಅನಾಥವಾಗಿ ರಸ್ತೆಯಲ್ಲಿ ಭಿಕ್ಷೆ ಬೇಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ರಸ್ತೆಯಂಚಿನಲ್ಲಿ, ರೈಲು- ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಾ, ದಿನದೂಡುತ್ತಿದ್ದಾರೆ.

ಕಾರವಾರ: ಸಾಕಿ ಸಾಲುಹಿ, ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ದೊಡ್ಡವರನ್ನಾಗಿ ಮಾಡಿದ ತಂದೆಯನ್ನೇ ಮಕ್ಕಳು ಬೀದಿ ಪಾಲು ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಐವರು ಮಕ್ಕಳ ತಂದೆಯಾಗಿರುವ ಕಾರವಾರ ತಾಲೂಕಿನ ಶಿರವಾಡ ಗ್ರಾಮದ ಹನುಮಂತ ವಡ್ಡರ್ ಈಗ ಅನಾಥವಾಗಿ ರಸ್ತೆಯಲ್ಲಿ ಭಿಕ್ಷೆ ಬೇಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಮಕ್ಕಳಿದ್ದೂ ಇಲ್ಲದಂತೆ ಅಲ್ಲಿ ಇಲ್ಲಿ ರಸ್ತೆಯಂಚಿನಲ್ಲಿ, ರೈಲು- ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಬೆಳಿಗ್ಗೆ ಹೀಗೆ ಭಿಕ್ಷೆ ಬೇಡುತ್ತಾ ಹೆದ್ದಾರಿಯಂಚಿನಲ್ಲಿರುವ ನಗರಸಭೆಯ ಗಾಂಧಿ ಪಾರ್ಕ್ ಬಳಿ ಬಂದಿದ್ದ ಹನುಮಂತ, ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕರ ಬಳಿ ಊಟಕ್ಕಾಗಿ ಹಣ ಕೇಳಿದ್ದಾನೆ. ಈ ವೇಳೆ ಮಾಧವ ನಾಯಕರು, ಯಾಕೆ ಭಿಕ್ಷೆ ಬೇಡುತ್ತೀಯಾ? ಎಂದೆಲ್ಲ ವಿಚಾರಿಸಿದಾಗ ಹನುಮಂತ ತನ್ನ ಇಡೀ ಕಥೆಯನ್ನು ಹಂಚಿಕೊoಡಿದ್ದಾನೆ.

ಕಲ್ಲು ಒಡೆಯುವ ಕೆಲಸ ಮಾಡಿಕೊಂಡಿದ್ದ ಹನುಮಂತನಿಗೆ ಈಗ 60 ವಯಸ್ಸು. ಆದರೂ ದುಡಿದು ಬಂದ ಕೂಲಿಯಲ್ಲಿ ಮನೆ ಕಟ್ಟಿ, ಮಕ್ಕಳನ್ನು ಸಾಕಿದ್ದಾರೆ. ಐವರ ಮಕ್ಕಳ ಪೈಕಿ ನಾಲ್ವರು ಹೆಣ್ಣುಮಕ್ಕಳಿದ್ದು, ಐವರಿಗೂ ಮದುವೆ ಕೂಡ ಮಾಡಿಸಿದ್ದಾರೆ. ಕಲ್ಲು ಒಡೆಯುವ ವೇಳೆ ಕಣ್ಣಿಗೆ ಕಲ್ಲು ತಾಗಿ ಹನುಮಂತನಿಗೆ ಕಳೆದ ಒಂದು ವರ್ಷದ ಹಿಂದೆ ಕಣ್ಣಿನ ಆಪರೇಷನ್ ಆಗಿದೆ. ಹೀಗಾಗಿ ಅಂದಿನಿoದ ಕೆಲಸಕ್ಕೆ ತೆರಳುತ್ತಿಲ್ಲ; ಕೈಯಲ್ಲಿ ಹಣ ಕೂಡ ಇಲ್ಲ.

ಇದೇ ಕಾರಣಕ್ಕೆ ಮಗ ಕುಡಿದು ಬಂದ ಹನುಮಂತ ಹಾಗೂ ಆತನ ಪತ್ನಿಗೆ, ಅಂದರೆ ಸ್ವಂತ ತಾಯಿಗೆ ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದನಂತೆ. ವರ್ಷದಿಂದಲೂ ಸಹಿಸಿಕೊಂಡು ಬಂದಿದ್ದ ಹನುಮಂತ, ಈಗ ಒಂದು ವಾರದ ಹಿಂದೆ ಇರಲಾಗದೆ ಮನೆ ತೊರೆದಿದ್ದಾನೆ. ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ದಿನ ಕಳೆಯುತ್ತಿದ್ದಾನೆ. ಸಿಕ್ಕವರ ಬಳಿ ಭಿಕ್ಷೆ ಬೇಡಿ, ಬಂದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ.

ಹನುಮoತನ ಈ ಕಥೆ ಕೇಳಿ ಮರುಗಿದ ಮಾಧವ ನಾಯಕ, ಕೂಡಲೇ ಯಲ್ಲಾಪುರದ ಅನಾಥಾಶ್ರಮವೊಂದಕ್ಕೆ ಸೇರಿಸಲು ಮಾತನಾಡಿದ್ದಾರೆ. ಈ ವೇಳೆ ತನ್ನ ಹೆಂಡತಿಯನ್ನೂ ಕರೆತರುವುದಾಗಿ ಹನುಮಂತ ಕೇಳಿಕೊಂಡಿದ್ದು, ಇಬ್ಬರನ್ನೂ ಸೇರಿಸಲು ವ್ಯವಸ್ಥೆ ಮಾಡುವುದಾಗಿ ಮಾಧವ ನಾಯಕ ತಿಳಿಸಿದ್ದಾರೆ. ಸ್ವಂತ ಮಕ್ಕಳೇ ನೋಡಿಕೊಳ್ಳದೆ ನಿರ್ಲಕ್ಷ್ಯ ಮಾಡಿರುವ ತಂದೆಗೆ ಈಗ ಮಾಧವ ನಾಯಕ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Back to top button