ಹೊರಬಿತ್ತು ಭಯಾನಕ ರಹಸ್ಯ?
ಕಾರು ದನಗಳ್ಳರಿಗೆ ಸೇರಿದ್ದೆ ?
ಹೊನ್ನಾವರ: ಗುಣವಂತೆಯ ನೆಲವಂಕಿ ಗುಡ್ಡದಲ್ಲಿರುವ ಪಾಂಡವರ ಕೆರೆ ಎಂದು ಕರೆಯಲಾಗುವ ಮಳೆಯ ನೀರು ತುಂಬಿದ್ದ ಹೊಂಡದಲ್ಲಿ ಸಂಪೂರ್ಣ ನುಜ್ಜಾದ ಸ್ಥಿತಿಯಲ್ಲಿ ಐಷಾರಾಮಿ ಕಾರೊಂದು ಪತ್ತೆಯಾಗಿದೆ. ದನ ಕಳ್ಳತನಕ್ಕೆ ಬಂದವರು ಸಾರ್ವಜನಿಕರ ಕೈಗೆ ಸಿಕ್ಕುಬಿದ್ದಾಗ ದುಷ್ಕರ್ಮಿಗಳು ಕಾರನ್ನು ಬಿಟ್ಟು ಓಡಿಹೋದಾಗ ಜನರ ಆಕ್ರೋಶಕ್ಕೆ ಕಾರು ಗುರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ಹಾಗೂ ಮಾಲಿಕನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಮಂಕಿಯ ನವಾಯತ್ ಕಾಲೋನಿಯಲ್ಲಿ ಮನೆಯ ಹಿಂದಿನ ತೋಟದಲ್ಲಿ ಕದ್ದ ದನ ಕರುಗಳನ್ನು ಕಟ್ಟು ಹಾಕಿದ್ದನ್ನು ಪೊಲೀಸರು ಪತ್ತೆಹಚ್ಚಿದ ಪ್ರಕರಣ ನಡೆದ ಮಾರನೆಯ ದಿನವೇ ಈ ಘಟನೆ ನಡೆದಿರುವುದು ಈ ಭಾಗದಲ್ಲಿ ಜಾನುವಾರು ಕಳ್ಳತನ ಬಹಳ ದೊಡ್ಡ ಪ್ರಮಾಣದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅನುಮಾನವನ್ನು ಹುಟ್ಟುಹಾಕಿದೆ.
ಗುಣವಂತೆ, ನೆಲವಂಕಿ, ಹಕ್ಕಲಕೇರಿ, ಮುಗಳಿ, ಕೆಳಗಿನೂರು, ಅಪ್ಸರಕೊಂಡ ಭಾಗದಲ್ಲಿ ನಿರಂತರ ದನ ಕಳ್ಳತನ ನಡೆಯುತ್ತಿರುವ ದೂರು ಒಂದೆಡೆಯಿದ್ದರೆ ಆರೋಪಿಗಳನ್ನು ಹಿಡಿದು ಪೊಲೀಸರಿಗೊಪ್ಪಿಸಿದರೂ ಸಲೀಸಾಗಿ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುವುದನ್ನು ಕಂಡು ಬೇಸತ್ತ ಜನರು ದನ ಕಳ್ಳರಿಗೆ ತಾವೇ ಶಿಕ್ಷೆ ಕೊಡುವುದಕ್ಕೆ ಮುಂದಾಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಬAಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಅಕ್ರಮ ಗೋ ಸಾಗಾಟ ಮತ್ತು ಜಾನುವಾರು ಕಳ್ಳತನಕ್ಕೆ ಬ್ರೇಕ್ ಹಾಕಬೇಕಿದೆ ಎನ್ನುವ ಒತ್ತಾಯ ಕೇಳಿಬರುತ್ತಿದೆ.ಇದರ ವಿಡಿಯೋ ಸುದ್ದಿಯನ್ನು ಇಂದಿನ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ..
-ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ