ಕುಮಟಾ: ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )
ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನ್ ಕುಮಟಾದಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿವಾರಣೆಗಾಗಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜ್ಞಾನಿ ಹಾಗೂ ಕಡಲ ಜೀವಶಾಸ್ತ್ರದ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ವಿ. ಎನ್. ನಾಯಕರವರು 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಮತ್ತು ಪರೀಕ್ಷಾ ಒತ್ತಡ ನಿವಾರಣೆ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ವರ್ಷವಿಡೀ ಓದಿದ್ರೂ ಈ ಎರಡು ತಿಂಗಳಲ್ಲಿ ಅಗ್ನಿಪರೀಕ್ಷೆ ಎದುರಿಸಲು ಸಿದ್ಧತೆ ನಡೆಸ್ತಾರೆ. ಹಗಲು-ರಾತ್ರಿ ಕಷ್ಟಪಟ್ಟು ಅಂತಿಮ ಪರೀಕ್ಷೆ ಬರೆಯಲು ಅಭ್ಯಾಸ ಮಾಡುತ್ತಾರೆ. ಅಭ್ಯಾಸ, ಸಿದ್ಧತೆ ಎಷ್ಟೇ ನಡೆಸಿದ್ರೂ ಪರೀಕ್ಷಾ ಸಮಯ ಹತ್ತಿರ ಬರುತ್ತಿದ್ದಂತೆ ಅವರಲ್ಲಿ ಒತ್ತಡ ಜಾಸ್ತಿ ಆಗುತ್ತದೆ. ಇದ್ರಿಂದಾಗಿ ಅವರ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಎಲ್ಲೆಡೆ ಕೊರೊನಾ ಮಾರಿಯ ಅಟ್ಟಹಾಸದಿಂದ ಮೊದಲು ಆನ್ಲೈನ್ ತರಗತಿಗಳು ನಡೆಯುತಿತ್ತು.
ಈಗಷ್ಟೇ ಶಾಲೆಗಳು ಪ್ರಾರಂಭವಾಗಿವೆ. ಅದೇನೆಯಿರಲಿ, ಸಾಂಕ್ರಾಮಿಕ ರೋಗ ಇರಲಿ, ಇಲ್ಲದಿರಲಿ ಪರೀಕ್ಷೆಗಳು ಆತಂಕವನ್ನು ಸೃಷ್ಟಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯಂತಹ ಕ್ಲಿಷ್ಟಕರ ಸಂದರ್ಭವನ್ನು ಎದುರಿಸಲು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಕ್ರೀಡೆಯಲ್ಲಿ ಹೇಗೆ ಮನಸ್ಸು ಉಲ್ಲಾಸವಾಗಿರುತ್ತೊ, ಹಾಗೆಯೇ ಅಧ್ಯಯನದಲ್ಲೂ ಮನಸ್ಸನ್ನು ಉಲ್ಲಾಸವಾಗಿ ಇರಿಸಿಕೊಳ್ಳಬೇಕು. ಮೊದಲಿಗೆ ಆತಂಕ ಹಾಗೂ ಚಿಂತೆ ಕಾರಣವಾಗುವಂಥವುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು.
ಪರೀಕ್ಷಾ ಸಮಯದಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಬೇಕು ಮತ್ತು ನಿದ್ರೆ ಸರಿಯಾಗಿ ಮಾಡಬೇಕು. ಪರೀಕ್ಷೆಯ ಮೊದಲ ದಿನ ಇಡೀ ರಾತ್ರಿ ಜಾಗರಣೆ ಮಾಡಿ ಓದದೇ, ಮೊದಲು ಓದಿದ್ದನ್ನು ಮನನ ಮಾಡಿ, ಬೇಗ ಮಲಗಬೇಕು ಮತ್ತು ಮನಸ್ಸನ್ನು ಆಹ್ಲಾದಕಾರವಾಗಿ ಇಟ್ಟುಕೊಳ್ಳಬೇಕು. ಪರೀಕ್ಷಾ ಕೊಠಡಿಯಲ್ಲಿ ಕುಳಿತು ಒಂದು ಸಾರಿ ದೀರ್ಘ ಉಸಿರನ್ನು ತೆಗೆದುಕೊಂಡು, ಉಸಿರನ್ನು ಹೊರಗೆ ಬಿಟ್ಟು, ಒತ್ತಡರಹಿತವಾಗಿರಬೇಕು. ಸಮಯದ ಉಳಿತಾಯ ಮಾಡಬೇಕು. ಹೀಗೆ ತಮಗೆ ತಾವೇ ಜಾಗೃತಿ ಮೂಡಿಸಿಕೊಳ್ಳುವುದು ಪರೀಕ್ಷೆ ಸಂಬಂಧಿತ ಆತಂಕವನ್ನ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಜೇಂದ್ರ ಎನ್. ನಾಯಕರವರು ಕೂಡ ಸ್ವಾಮಿ ವಿವೇಕಾನಂದರ ಉಕ್ತಿಗಳ ಮೂಲಕ, ಅನೇಕ ನಿದರ್ಶನಗಳ ಮೂಲಕ ಪರೀಕ್ಷೆ ಎದುರಿಸುವುದು ಹೇಗೆ, ಪರೀಕ್ಷಾ ಭಯ ನಿವಾರಣೆ ಹೇಗೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಶ್ರೀಮತಿ ಲೀನಾ ಗೊನೆಹಳ್ಳಿ ಸ್ವಾಗತಿಸಿದರು. ಶ್ರೀಧರ ಭಟ್ ವಂದಿಸಿದರು.