ಅಂಕೋಲಾ: ಜಿಲ್ಲೆಯ ಹಿರಿಯ ಅಧಿಕಾರಿಗಳ ಖಡಕ್ ಸೂಚನೆ ಮೇರೆಗೆ ಕಾರ್ಯಪ್ರವತ್ತರಾಗಿರುವ ಖಾಕಿ ಪಡೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ಬಿಗಿ ಕ್ರಮ ಕೈಗೊಳ್ಳುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ 1-2 ಸ್ಥಳಗಳಲ್ಲಿ ಅಕ್ರಮ ಗಾಂಜಾ, ಅಕ್ರಮ ಮದ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಪೋಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ನಂತರ ಅಕ್ರಮ ಮರಳು ಸಾಗಾಟ ವಾಹನಗಳನ್ನು ಜಪ್ತಿ ಮಾಡಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ಕಳ್ಳ ದಂಧೆ ಕೋರರಿಗೆ ಬಿಸಿ ಮುಟ್ಟಿಸಿದ್ದರು. ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಮುಂದುವರೆಸಿರುವ ಪೊಲೀಸರು ಓಸಿ ಹಾಗೂ ಅಕ್ರಮ ಮದ್ಯ ಮಾರಾಟದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ಮೂರು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಪಟ್ಟಣದ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ವ್ಯಕ್ತಿಯೋರ್ವ ಮಟಕಾ (ಓಸಿ) ಚೀಟಿ ಬರೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಆತನಿಂದ ಮಟಕಾ ಸಾಮಗ್ರಿಗಳು ಹಾಗೂ 1330 ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಂಬಾರದ ಅರುಣ ನಂದಾ ಮಡಿವಾಳ (39) ಬಂದಿತ ಆರೋಪಿಯಾಗಿದ್ದು,ಆತನನ್ನು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎನ್ನಲಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ. ತಾಲೂಕಿನ ಅವರ್ಸಾ -ಹಟ್ಟಿಕೇರಿ, ಬೆಲೇಕೇರಿ, ಸುಂಕಸಾಳ, ಬೆಳಸೆ – ಶಿರೂರು, ಮಂಜಗುಣಿ, ಬೆಳಂಬಾರ ಸೇರಿದಂತೆ ವಿವಿಧ ಗ್ರಾಮ ಪಂಚಾಯತ್ ಹಾಗೂ ಇತರೆ ಪ್ರದೇಶ ವ್ಯಾಪ್ತಿಯಲ್ಲಿ ಹೈಟೆಕ್ ರೀತಿಯಲ್ಲಿಯೂ ಓಸಿ ( ಮಟಕಾ ) ಹಾವಳಿ ಜೋರಾಗಿ ನಡೆಯುತ್ತಲೇ ಇದೆ ಎನ್ನಲಾಗಿದ್ದು,ಅದನ್ನು ನಿಯಂತ್ರಿಸಬೇಕಾದ ಕೆಲವರು ಅಲ್ಲಲ್ಲಿ ಬೀಟನ್ನು ತಾವೇ ಗುತ್ತಿಗೆ ಪಡೆದಿದ್ದೇವೆ ಎಂಬಂತೆ ಎಂಜಲು ಕಾಸಿಗೆ ಕೈಯೊಡ್ಡಿ, ಅಡ್ಡ ಕಸುಬಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಕ್ರಮ ಚಟುವಟಿಕೆಗಳಿಗೆ ತೆರೆಮರೆಯ ಹಿಂದೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗಿದ್ದು ,ಮೇಲಾಧಿಕಾರಿಗಳು ಈ ಕುರಿತು ಗಮನ ಹರಿಸುವರೇ? ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ.
ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ಭಾವಿಕೇರಿಯ ಗಾಂವಕರವಾಡಾದಲ್ಲಿ ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟ ಕರ್ನಾಟಕ ರಾಜ್ಯದ ಒರಿಜಿನಲ್ ಚಾಯ್ಸ್ ಎಂಬ ಹೆಸರಿನ ಸುಮಾರು 3513 ರೂಪಾಯಿ ಮೌಲ್ಯದ 90 ಎಂ.ಎಲ್ ನ 100 ಸ್ಯಾಚೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿಗಳಾದ ತಿಮ್ಮಪ್ಪ ಹೊನ್ನಪ್ಪ ನಾಯಕ ಮತ್ತು ಸುಬ್ರಾಯ ನಾರಾಯಣ ನಾಯಕ ಎನ್ನುವವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು , ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ತಾಲೂಕಿನ ಬಹುತೇಕ ಕಡೆ ಸಂದಿ ಗೊಂದಿಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ ಎನ್ನಲಾಗಿದ್ದು, ಸರ್ಕಾರಿ ಸಾಮ್ಯದ ಮದ್ಯ ಮಾರಾಟ ಮಳಿಗೆ ಹಾಗೂ ಇತರೆಡೆಯಿಂದಲೂ ಚೀಲಗಟ್ಟಲೆ, ಬಾಕ್ಸ್ ಗಟ್ಟಲೆ ಮದ್ಯದ ಸ್ಯಾಚೆಟ್ ಗಳು, ಬಾಟಲಿಗಳನ್ನು ಒಮ್ಮೇಲೆ ಓಯ್ದು ಹಳ್ಳಿಗಳಿಗೆ ತಲುಪಿಸುವ ವ್ಯವಸ್ಥಿತ ಜಾಲವೂ ಇದೆ ಎನ್ನಲಾಗಿದ್ದು ಸಂಬಂಧಿತ ಇಲಾಖೆಗಳು ಇಂತವರ ಮೇಲೆ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಅನಿಸಿಕೆ ಆಗಿದೆ.
ಭಾವಿಕೇರಿ ಅಕ್ರಮ ಮದ್ಯ ಮಾರಾಟ ಮತ್ತು ಕೆ.ಸಿ ರಸ್ತೆ ಒಸಿ ಕೇಸ್ ಗಳಿಗೆ ಸಂಬಂಧಿಸಿದಂತೆ ಪಿ.ಎಸ್ .ಐ ಪ್ರವೀಣಣಕುಮಾರ್ ನೇತೃತ್ಪದಲ್ಲಿ ಪೋಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ,
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ