ರಾಜ್ಯದಲ್ಲಿಯೇ ಅತೀ ಹೆಚ್ಚು ಮತಗಳ ಅಂತರದ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಹೆಬ್ಬಾರ: ವೈಯಕ್ತಿಕ ಟೀಕೆಯೂ ಸರಿಯಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವರು
ಅಂಕೋಲಾ:ವಿಧಾನ ಪರಿಷತ್ ಚುನಾವಣೆಯನ್ನು ಭಾರತೀಯ ಜನತಾ ಪಕ್ಷ ಸವಾಲಾಗಿ ಸ್ವೀಕರಿಸಿದೆ
ಉತ್ತರ ಕನ್ನಡ ಜಿಲ್ಲೆಯ ಸ್ಥಾನವನ್ನು ರಾಜ್ಯದಲ್ಲೇ ಅತಿ ಹೆಚ್ಚು ಅಂತರದಿಂದ ಗೆದ್ದು ದಾಖಲೆಯನ್ನು ನಿರ್ಮಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ಹೇಳಿದರು.
ಅಂಕೋಲಾದಲ್ಲಿ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಸದಸ್ಯರ ಜೊತೆ ವಿಧಾನಪರಿಷತ್ ಚುನಾವಣಾಪೂರ್ವ ಚುನಾವಣಾ ಪೂರ್ವ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ಹೋರಾಟ ಮಾಡುತ್ತಿಲ್ಲ ಇದು ಪಕ್ಷದ ಸೈದ್ಧಾಂತಿಕ ಹೋರಾಟವಾಗಿದೆ ಎಂದ ಅವರು ಮುಂದೆ ನಡೆಯಲಿರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದರು.
ಬಿಜೆಪಿ ಬೆಂಬಲಿತರು ಪಕ್ಷದ ಅಭ್ಯರ್ಥಿಗೆ ಮಾತ್ರ ಮೊದಲ ಪ್ರಾಶಸ್ತ್ಯದ ಮತ ನೀಡಿದರೆ ಸಾಕು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳುವ ಅಗತ್ಯತೆ ಇಲ್ಲ ಎಂದ ಅವರು ಚುನಾವಣಾ ಪ್ರಚಾರಕ್ಕೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ತಮ್ಮನ್ನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾರೆ, ಕಾರ್ಯಕರ್ತರು ಸೈನಿಕರಂತೆ ಉತ್ಸಾಹದಿಂದ ದುಡಿದು ಗಣಪತಿ ಉಳ್ವೇಕರ್ ಅವರನ್ನು ಆಯ್ಕೆ ಮಾಡಲು ದುಡಿಯುವಂತೆ ಅವರು ಕರೆ ನೀಡಿದರು.
ಹಿಂದುಳಿದ ವರ್ಗಗಳ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ಅವರು ಮಾತನಾಡಿ ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಘೋಟ್ನೇಕರ್ ಅವರು ಇದೀಗ ಪರಿಷತ್ ಸದಸ್ಯತ್ವದಲ್ಲಿ ದಮ್ ಇಲ್ಲ ಎಂದು ಹೇಳುತ್ತಿರುವುದು ಅಧಿಕಾರ ಅನುಭವಿಸಿದ ನಂತರ ಅವರು ನೀಡುತ್ತಿರುವ ಹೇಳಿಕೆ ಮತದಾರರಿಗೆ ಮಾಡಿದ ಅವಮಾನವಾಗಿದೆ ಎಂದರು.
ಈ ವೇಳೆ ರಾಜೇಂದ್ರ ನಾಯ್ಕ ಅವರಿಗೆ ವೈಯಕ್ತಿಕ ಟೀಕೆ ಹೆಚ್ಚು ಮುದುವರೆಸದಂತೆ ಕಿವಿ ಮಾತು ಹೇಳಿದ ಸಚಿವರು, ವಿರೋಧ ಪಕ್ಷದವರ ಕುರಿತು ವೈಯಕ್ತಿಕ ಟೀಕೆ ಮಾಡುವ ಬದಲು, ನಮ್ಮ ಪಕ್ಷದ ಬಗ್ಗೆಯೇ ಹೆಚ್ಚಾಗಿ ಮಾತಾಡಿ ಮತದಾರರ ಮನ ಗೆಲ್ಲೋಣ. ವೈಯಕ್ತಿಕ ಟೀಕೆಯಲ್ಲಿ ಕಾಲಹರಣ ಬೇಡ ಎಂಬಂತೆ ತಮ್ಮ ಪ್ರಬುಧ್ಧತೆ ಮೆರೆದರು.
ಜಿಲ್ಲಾ ಪ್ರಭಾರಿ ಉಷಾ ಹೆಗಡೆ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಹಿಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ನಾಯಕ ಮೊದಲಾದವರು ಮಾತನಾಡಿದರು.
ಹಿರಿಯ ಮುಖಂಡ ಭಾಸ್ಕರ ನಾರ್ವೇಕರ್, ಜಿಲ್ಲಾ ಯುವ ಮೋರ್ಛಾ ಅಧ್ಯಕ್ಷ ಪ್ರಶಾಂತ ನಾಯಕ, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ಬಬ್ರುವಾಡ, ಬೆಳಸೆ, ಶೆಟಗೇರಿ, ಬೆಳಂಬಾರ, ಮೊಗಟಾ ಮತ್ತಿತರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದಿಯಾಗಿ ಇತರೆ ಕೆಲ ಸದಸ್ಯರು, ಪುರಸಭೆ ಕೆಲ ಸದಸ್ಯರು, ಸಚಿವರ ಕೋರಿಕೆ ಮೇರೆಗೆ ಕೈಯೆತ್ತಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಕೃಷ್ಣಕುಮಾರ ಮಹಾಲೆ, ಮಾರುತಿ ಗೌಡ, ಸಣ್ಣಪ್ಪ ಗೌಡ, ಬಿಂದೇಶ ಹಿಚ್ಕಡ ಸೇರಿದಂತೆ ಇತರೆ ಹಿರಿ ಕಿರಿಯ ಮುಖಂಡರು ಉಪಸ್ಥಿತರಿದ್ದರು.
ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ