ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ : ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕಾರ

ಭಟ್ಕಳದ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2021-22 ನೇ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ‘ಸ್ವಾಗತ ಕಾರ್ಯಕ್ರಮವು’ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರಿನ ಅಭಿಮೋ ಟೆಕ್ನೊಲಜಿಸ್ ಸಂಸ್ಥಾಪಕ ಅಧ್ಯಕ್ಷ ನವೀನ ನಾಯಕ ಕಾರ್ಯಕ್ರಮ ಉದ್ಘಾಟಿಸಿ ‘ವಿದ್ಯಾರ್ಥಿಗಳು ತಮ್ಮೆದುರಿಗಿರುವ ಸಮಸ್ಯೆಯನ್ನೇ ಅವಕಾಶವಾಗಿ ಮಾರ್ಪಡಿಸಿಕೊಳ್ಳಬೇಕು, ಆಗಲೇ ಯಶಸ್ಸು ಗಳಿಸಲು ಸಾಧ್ಯ’ ಎಂದು ಕಿವಿಮಾತು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ, ಮೂಡುಬಿದ್ರೆ ಎಸ್.ಬಿ.ಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಸಂದೀಪ ಶೇಟ್ ಮಾತನಾಡಿ ‘ವಿದ್ಯಾರ್ಥಿಗಳು ಕಾಲೇಜಿನ ಎಲ್ಲ ಪಠ್ಯ – ಪಠ್ಯೇತರ ಚಟುವಟಿಕೆಗಳನ್ನು ಅನುಲಕ್ಷಿಸದೇ ಶೃದ್ಧೆಯಿಂದ ಪಾಲ್ಗೊಳ್ಳಬೇಕು, ಅದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ’ ಎಂದು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ’ನ ಅಧ್ಯಕ್ಷ ಡಾ. ಸುರೇಶ ನಾಯಕ್ ‘ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳನ್ನು ಸೂಕ್ತವಾಗಿ ಉಪಯೋಗಿಸಿ, ಉನ್ನತ ಹುದ್ದೆಯನ್ನೇರಬೇಕು’ ಎಂದು ಹೇಳಿದರು.

2020-21ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಹಾಗೂ ಬಿ.ಸಿ.ಎ ವಿಭಾಗದ ಉಪಪ್ರಾಂಶುಪಾಲ ವಿಖ್ಯಾತ ಪ್ರಭು ಪರಿಚಯಿಸಿದರೆ, ಉಪನ್ಯಾಸಕ ಓಂಕಾರ ರ‍್ಬಳ್ಳಿ ವರದಿ ವಾಚಿಸಿದರು. ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಸ್ವಾಗತಿಸಿದರೆ, ಬಿ.ಕಾಂ ಶೈಕ್ಷಣಿಕ ಸಂಯೋಜಕರಾದ ವಿಘ್ನೇಶ ಪ್ರಭು ವಂದಿಸಿದರು. ಉಪನ್ಯಾಸಕರಾದ ನಾಗರಾಜ ನಾಯ್ಕ ಹಾಗೂ ಸ್ವಾತಿ ಪೈ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.

Exit mobile version