Important
Trending

ಹಿಂಸಾತ್ಮಕವಾಗಿ ಸಾಗಾಟ|ಮಂಕಿಯಲ್ಲಿ 15 ಜಾನುವಾರುಗಳು ವಶಕ್ಕೆ

ಹಿಂಸಾತ್ಮಕವಾಗಿ ದನ ಸಾಗಿಸುತ್ತಿದ್ದ ದುಷ್ಕರ್ಮಿಗಳು
ಮಂಕಿ ಪೊಲೀಸರ ಕಾರ್ಯಾಚರಣೆ
ಭಟ್ಕಳ ಮೂಲದ ಇಬ್ಬರು ವಶಕ್ಕೆ

ಹೊನ್ನಾವರ: ಮಂಕಿ ಪೊಲೀಸರು ಮತ್ತೊಂದು ಭರ್ಜರಿ ಬೇಟೆಯಾಡಿದ್ದು, 15 ಜಾನುವಾರುಗಳನ್ನು ತುಂಬಿದ್ದ ಕಂಟೇನರ್ ಲಾರಿ ಹಾಗೂ ಭಟ್ಕಳ ಮೂಲದ ಇಬ್ಬರನ್ನು ಅನಂತವಾಡಿ ಚೆಕ್ ಪೋಸ್ಟ್ ನಲ್ಲಿ ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ. ಒಂದೆಡೆ ತಾಲೂಕಿನಲ್ಲಿ ರಾತ್ರಿ ಸಮಯದಲ್ಲಿ ಅವ್ಯಾಹತವಾಗಿ ಗೋವುಗಳ ಕಳ್ಳತನ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವಾಗಲೇ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಬಾರೀ ಗಾತ್ರದ ವಾಹನಗಳಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ಪೊಲೀಸರ ಕಾರ್ಯಾಚಾರಣೆಯಿಂದ ಪದೇ ಪದೇ ಬೆಳಕಿಗೆ ಬರುತ್ತಿದೆ. ಕಳೆದ ಕೆಲ ವರ್ಷಗಳಿಂದ ಮಂಕಿ ಅನಂತವಾಡಿ ಚೆಕ್‌ಪೋಸ್ಟ್ ನಲ್ಲಿ ಅನೇಕ ಅಕ್ರಮ ಗೋ ಸಾಗಾಟದಾರರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಈ ಪಟ್ಟಿಗೆ ಶುಕ್ರವಾರದ ಪ್ರಕರಣ ಹೊಸ ಸೇರ್ಪಡೆಯಾಗಿದೆ. ಶುಕ್ರವಾರ ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಯಂತೆ ಮಂಕಿ ಹಾಗೂ ಮುರ್ಡೇಶ್ವರ ಠಾಣೆಯ ಸಿಬ್ಬಂದಿಗಳ ತಂಡದೊಂದಿಗೆ ಎ.ಎಸ್ಪಿ ನಿಖಿಲ್ ಬಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದಿದ್ದ ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರ ಲಾರಿಯನ್ನು ತಡೆದು ಪರಿಶೀಲಿಸಿದಾಗ ಲಾರಿಯ ಒಳಗೆ 3 ಕೋಣ ಒಂದು ಎಮ್ಮೆ ಹಾಗೂ 11 ಎತ್ತು ಒಟ್ಟೂ 15 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿರುವುದು ಕಂಡುಬಂದಿದೆ. ಲಾರಿಯ ಚಾಲಕ ಭಟ್ಕಳ ಮೂಲದ ನಝರುಲ್ಲಾ ಬಶೀರ್ ಸಾಬ್ ಹಾಗೂ ಕ್ಲೀನರ್ ಮಹಮದ್ ಹುಸೇನ್ ಎಂಬಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದರ ವಿಡಿಯೋ ಸುದ್ದಿಯನ್ನು ಸಂಜೆ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

ಕಟುಕರಿಂದ ವಶಪಡಿಸಿಕೊಂಡ ಜಾನುವಾರುಗಳನ್ನು ಠಾಣೆಯ ಪಕ್ಕದ ಶೆಡ್‌ನಲ್ಲಿ ಕಟ್ಟಿ ಆರೈಕೆ ಮಾಡಲಾಗುತ್ತಿದೆ. ಕಲಘಟಗಿಯಿಂದ ಜಾನುವಾರುಗಳನ್ನು ತಂದಿರುವುದಾಗಿ ಆರೋಪಿಗಳು ಬಾಯಿಬಿಟ್ಟಿದ್ದು ನಿಜಾಂಶ ತನಿಖೆಯಿಂದಷ್ಟೇ ಹೊರಬರಬೇಕಿದೆ. ಕಲಘಟಗಿಯಿಂದ ಮಂಕಿಯವರೆಗೆ ಅನೇಕ ಚೆಕ್‌ಪೋಸ್ಟ್ಗಳನ್ನು ದಾಟಿಕೊಂಡು ಬಂದಿದ್ದರೂ ಎಲ್ಲಿಯೂ ಅಕ್ರಮ ಸಾಗಾಟದ ಸುಳಿವು ಪೊಲೀಸರಿಗೆ ಸಿಗದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಮತ್ತೆ ಮತ್ತೆ ಅಕ್ರಮ ಗೋಸಾಗಾಟದ ಪ್ರಕರಣವನ್ನು ಪತ್ತೆ ಹಚ್ಚುತ್ತಿರುವ ಮಂಕಿ ಪೊಲಿಸರ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

– ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

[sliders_pack id=”1487″]

Back to top button