Focus News
Trending

ಇಂದು ಬರಲಿದೆ ವರದಿ: ಅಂಕೋಲಾ ಜನರಲ್ಲಿ ಹೆಚ್ಚಿದ ಆತಂಕ

ಅಂಕೋಲೆಗೆ ಅಂಟಿದ ಮಹಾ-ನಂಜು.
ಇನ್ನೆಷ್ಟು ಮಂದಿಗೆ ವಕ್ಕರಿಸಲಿದೆಯೋ ಕೊರೊನಾ
ಜನತೆಯಲ್ಲಿ ಹೆಚ್ಚುತ್ತಿರುವ ಆತಂಕ!

ಅಂಕೋಲಾ : ಜಿಲ್ಲೆಯ ಇತರೇ ಎಲ್ಲಾ ತಾಲೂಕುಗಳಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು, ಅಂಕೋಲಾದಲ್ಲಿ ಇರದೇ ಜನ ನಿಶ್ಚಿಂತೆಯಿಂದ ಇರುವಂತೆ ಮಾಡಿತ್ತು. ಹಲವು ಶಂಕೆ ಹಾಗೂ ವದಂತಿಗಳು ಜನರ ಆತಂಕಕ್ಕೆ ಕಾರಣವಾಗಿತ್ತು. ಈ ನಡುವೆ ಜೂನ್ 17ರಂದು ಭಾವಿಕೇರಿಯ ಮಹಿಳೆಯೋರ್ವಳಲ್ಲಿ ಸೋಂಕು ಇರುವುದು ದೃಢವಾಗಿದ್ದು ಅವಳನ್ನು ಕಾರವಾರದ ಕೋವಿಡ್ ವಾರ್ಡಗೆ ಸ್ಥಳಾಂತರಿಸಲಾಗಿದೆ. ಈ ಘಟನೆ ಸ್ಥಳೀಯರ ಮತ್ತು ತಾಲೂಕಿನ ಜನತೆಯ ನೆಮ್ಮದಿ ಕಸಿದುಕೊಂಡಿದೆ.
ರಾಜ್ಯದ ನಾನಾ ಭಾಗಗಳಲ್ಲಿ ವರದಿಯಾಗುತ್ತಿರುವ ಖಚಿತ ಪ್ರಕರಣಗಳಲ್ಲಿ ದೂರದ ಮಹಾರಾಷ್ಟ್ರ ದಿಂದ ಬಂದವರಲ್ಲಿಯೇ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬಂದಿದ್ದು, ಅಂಕೋಲಾದಲ್ಲಿ ಖಾತೆ ಆರಂಭಿಸಿದ ಸೋಂಕಿತಳ ಹಿಂದೆ ಮುಂಬೈ ಮಹಾ-ನಂಜಿನ ನಂಟು ಕಂಡುಬಂದಿದೆ.
ಮುಂಬೈಯಿಂದ ರೈಲು ಮೂಲಕ ಬಂದಿಳಿದು ಕುಮಟಾದಲ್ಲಿ 7 ದಿನಗಳ ಸಾಂಸ್ಥಿಕ ಕ್ವಾರೆಂಟೈನ್ ಮುಗಿಸಿದ್ದ ವ್ಯಕ್ತಿಯ ಗಂಟಲು ದೃವ ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು ಮತ್ತೆ 7 ದಿನಗಳ ಹೋಮ್ ಕ್ವಾರೆಂಟೈನ್‌ಗೆ ಒಳಪಟ್ಟಿದ್ದರು ಎನ್ನಲಾಗಿದ್ದು, ಆ ವೇಳೆ ತನ್ನ ತಂದೆಗೆ ಸ್ಥಳೀಯ ವಸತಿಗೃಹದಲ್ಲಿ ತಂಗಲು ವ್ಯವಸ್ಥೆ ಮಾಡಲು ಹೋದ ಶಿರಸಿ ಮೂಲದ ಮಹಿಳೆ, ಭಾವಿಕೇರಿಯ ಗಂಡನ ಮನೆಗೆ ವಾಪಸ್ಸಾಗುವಾಗ ಅರಿವಿದ್ದೊ-ಇಲ್ಲದೆಯೋ ಮಹಾಮಾರಿಯನ್ನು ಹೊತ್ತು ತಂದಂತಾಗಿದೆ.
ಖಾಸಗಿ ಬ್ಯಾಂಕ ಒಂದರಲ್ಲಿ ಉದ್ಯೋಗಿಯಾಗಿರುವ ಈ ಮಹಿಳೆ, ಹಾಲು ಮತ್ತಿತ್ತರ ಚಿಕ್ಕಪುಟ್ಟ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ಇವಳ ಪತಿಯ ಪ್ರಾಥಮಿಕ ಸಂಪರ್ಕದ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೋಲೀಸ್ ಇಲಾಖೆಯವರು ಹಲವರ ಮಾಹಿತಿ ಕಲೆಹಾಕಿದ್ದು ಅವರ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ಇನ್ನಷ್ಟು ಜನರಿಗೆ ಗಂಟಲುದೃವ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆ ಇದ್ದು ಜೂನ್ 19ರಂದು ಪರೀಕ್ಷೆಗೆ ಒಳಪಡಿಸಲು ಆರೋಗ್ಯ ಇಲಾಖೆ ಸಿದ್ದತೆ ನಡೆಸುತ್ತಿದೆ. ಭಾವಿಕೇರಿಯ ಮಹಿಳೆ ಮತ್ತು ಅವಳ ಗಂಡನನ್ನು ಕುಮಟಾಕ್ಕೆ ಕರೆದುಕೊಂಡು ಹೋಗಿಬಂದ ಕಾರ ಚಾಲಕನ ಗಂಟಲು ದೃವ ಪರೀಕ್ಷೆ ವರದಿ ಶುಕ್ರವಾರ ಬರುವ ಸಾಧ್ಯತೆ ಇದ್ದು, ಆ ವರದಿಗಾಗಿಯೇ ತೀವೃ ಕುತೂಹಲದಿಂದ ಎದುರು ನೋಡುವಂತಾಗಿದೆ.

ಕುಮಟಾ ಉಪವಿಭಾಗಾಧಿಕಾರಿ ಅಜೀತ್, ಅಂಕೋಲಾ ತಹಸೀಲ್ದಾರ್ ಉದಯ ಕುಂಬಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ವೈ. ಸಾವಂತ, ಸಿ.ಪಿ.ಐ ಕೃಷ್ಣಾನಂದ ನಾಯಕ, ಪಿ.ಎಸ್.ಐ ಈ.ಸಿ ಸಂಪತ್ತ, ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ನಾಯ್ಕ, ಆಡಳಿತ ವೈಧ್ಯಾಧಿಕಾರಿ ಮಹೇಂದ್ರ ನಾಯಕ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಸಮಾಲೋಚಿಸಿ ತಾಲೂಕಿನಲ್ಲಿ ಕೈಗೊಳ್ಳಬೇಕಾದ ಹಲವು ಮುಂಜಾಗೃತೆಗಳ ಬಗ್ಗೆ ಚರ್ಚಿಸಿದರಲ್ಲದೇ ಜನತೆ ಅನಗತ್ಯ ಆತಂಕ ಪಡದಂತೆ ಸೂಚಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]

Back to top button