ಅಂಕೋಲಾ : ಅಡಿಕೆ ಮತ್ತು ಕಾಳುಮೆಣಸು ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ,ಲಾರಿಯಲ್ಲಿದ್ದ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾದ ಘಟನೆ ಅಂಕೋಲಾ ತಾಲೂಕಿನ ಕೊಡಸಣಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐ ಆರ್ ಬಿ ಯ ಅವೈಜ್ಞಾನಿಕ ಹಾಗೂ ಅಪೂರ್ಣ ಕಾಮಗಾರಿಯಿಂದಲೂ ಜಿಲ್ಲೆಯ ಹಲವೆಡೆ ನಾನಾ ರೀತಿಯ ಸಮಸ್ಯೆಗಳು ಹಾಗೂ ಅಪಘಾತ ಹೆಚ್ಚಲು ಕಾರಣವಾಗಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ.
ಅಂಕೋಲಾ ತಾಲೂಕಿನ ಹೊಸೂರು ಬ್ರಿಡ್ಜ್ ತಿರುವಿನ ಬಳಿ,ಮಂಗಳೂರು ಕಡೆಯಿಂದ ಗುಜರಾತ ಕಡೆ ಅಂಕೋಲಾ ಮಾರ್ಗವಾಗಿ ಸಾಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಸುಕಿನ ವೇಳೆ ನಡೆದ ಈ ರಸ್ತೆ ಅಪಘಾತದಲ್ಲಿ ಲಾರಿ ಚಾಲಕ ಬಲರಾಮ ನೇವಲ್ ಸಿಂಗ ಮತ್ತು ಸಹಾಯಕ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಲಾರಿಯಲ್ಲಿ ಸಿಲುಕಿಕೊಂಡಿದ್ದ ಇವರನ್ನು ,ಸ್ಥಳೀಯರ ಸಹಕಾರದಲ್ಲಿ 1033 ಹೆದ್ದಾರಿ ಅಂಬುಲೆನ್ಸ್ ವಾಹನದ ಮೂಲಕ ತಾಲೂಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿದ 112 ERSS ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಲಾರಿ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಕಾಳು ಮೆಣಸು ಹಾಗೂ ಅಡಿಕೆ ಚೀಲಗಳು ಚೆಲ್ಲಾಪಿಲ್ಲಿಯಾಗಿದ್ದವು.
ಈ ಹಿಂದೆಯೂ ಇದೇ ಸ್ಥಳಗಳಲ್ಲಿ ಕೆಲ ಅಪಘಾತಗಳು ಸಂಭವಿಸಿದ್ದವು. ಬೆಳಗಿನ ಜಾವ ಅಪಾಯಕಾರಿ ತಿರುವಿನಲ್ಲಿ ಚಾಲಕ ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿ ದ್ದರಿಂದ ಅಪಘಾತ ವಾಗಿರಬಹುದು ಎಂಬುದು ಸಹ ಕೆಲವರ ಅಭಿಪ್ರಾಯವಾಗಿದೆ.ಈ ಕುರಿತು ಸಂಜೆಯವರೆಗೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾದಂತಿಲ್ಲ. ಲಾರಿ ಮಾಲಕ ಬಂದನಂತರ ಪ್ರಕರಣ ದಾಖಲಾಗಲಿದೆ ಎನ್ನಲಾಗಿದ್ದು,ಆನಂತರವಷ್ಟೇ ಹೆಚ್ಚಿನ ಮಾಹಿತಿಗಳು ಲಭ್ಯ ಆಗಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ