ಗೋಕರ್ಣದಲ್ಲಿ ಬೆಂಕಿ ಅನಾಹುತ

ಗೋಕರ್ಣ:  ಮಹಾಬಲೇಶ್ವರ ದೇವಸ್ಥಾನ, ಗಣಪತಿ ದೇವಸ್ಥಾನ ಸೇರಿದಂತೆ ಹತ್ತಾರು ಪುರಾಣ ಪ್ರಸಿದ್ಧ ದೇವಸ್ಥಾನಗಳು, ಓಂ ಬೀಚ್, ಕೂಡ್ಲೆ, ಮತ್ತಿತರ ಸುಂದರ ಕಡಲ ತೀರಗಳ ಮೂಲಕ ದೇಶ ವಿದೇಶಗಳಲ್ಲಿ ಗುರುತಿಸಿ ಕೊಂಡಿರುವ ಗೋಕರ್ಣ, ಹಲವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ತಾಲೂಕು ಇಲ್ಲವೇ,ಪಟ್ಟಣ ಪಂಚಾಯಿತಿ ಆಗಿ ಅಭಿವೃದ್ಧಿ ಹೊಂದಬೇಕಿದ್ದ ಈ ಪ್ರದೇಶ,ನಾನಾರೀತಿ ಆಡಳಿತಾತ್ಮಕ ತೊಂದರೆಗಳಿಂದ ನಲುಗುವಂತಾಗಿದೆ.             

ಜಗತ್ತಿನ ಹೆಸರಾಂತ ಪ್ರವಾಸಿ ಸ್ಥಳದಲ್ಲಿ  ಒಂದಾಗಿರುವ ಗೋಕರ್ಣದಲ್ಲಿ ಅಗ್ನಿಶಾಮಕ ದಳದಂತ ತುರ್ತು ಸೇವಾ ಘಟಕ ಇರದಿರುವುದು  ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ .  ಶನಿವಾರ ಮಧ್ಯರಾತ್ರಿ  ರಾತ್ರಿ ಗೋಕರ್ಣದ ಬಸ್ ನಿಲ್ದಾಣದ ಬಳಿ ಇರುವ ವೈನ್ ಶಾಪ್ ಒಂದರಲ್ಲಿ ಆಕಸ್ಮಿಕ ಅಗ್ನಿದುರಂತ ಸಂಭವಿಸಿದಾಗ ಸುಮಾರು 35 ಕಿಲೋ ಮೀಟರ್ ದೂರದ ಕುಮಟಾದಿಂದ ಅಗ್ನಿ ಶಾಮಕ ದಳದ ವಾಹನ ಆಗಮಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಮತ್ತಿತರ ಸರಕುಗಳು ಸುಟ್ಟು ಕರಕಲಾಗಿದ್ದು ಅಪಾರ ಹಾನಿ ಸಂಭವಿಸಿದೆ.

ಗೋಕರ್ಣಕ್ಕೆ ನಾನಾ ಕಾರಣಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು,ಜನಪ್ರತಿನಿಧಿಗಳು,ಮಂತ್ರಿ ಮಹೋದಯರಾದಿಯಾಗಿ,ಚಿತ್ರರಂಗದ ಗಣ್ಯರು ಸೇರಿದಂತೆ ವಿವಿಧ ಸ್ಥರದ ಸೆಲೆಬ್ರಿಟಿಗಳು ಆಗಾಗ ಭೇಟಿ ಕೊಡುತ್ತಲೇ ಇರುತ್ತಾರೆ. ಅದರ ಹೊರತಾಗಿ ಪ್ರತಿದಿನ ದೇಶ – ವಿದೇಶಗಳ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗುತ್ತಿರುತ್ತಾರೆ.ಶಿವರಾತ್ರಿ,ಬಂಡಿಹಬ್ಬ ಮತ್ತಿತರ ಪ್ರಮುಖ ದಿನಗಳಲ್ಲಿ ಲಕ್ಷಾಂತರ ಜನರು ಬಂದು ಹೋಗುವ ಸಾಧ್ಯತೆ ಇರುತ್ತದೆ.

ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ರೆಸಾರ್ಟಗಳು, ಹೋಟೆಲ್, ಲಾಡ್ಜಿಂಗ್ ಮತ್ತಿತರ ಬಹುಮಾಡಿ ಕಟ್ಟಡಗಳು ನಿರ್ಮಾಣ ಗೊಂಡಿದೆ ಮತ್ತು ನಿರ್ಮಾಣಗೊಳ್ಳುತ್ತಿವೆ. ಹೋಗುವುದು ಸಾಮಾನ್ಯ ಇಂತಹ ಒಂದು ಸ್ಥಳದಲ್ಲಿ ಅಗ್ನಿಶಾಮಕದಂತ ತುರ್ತು ಸೇವೆ ಸೌಲಭ್ಯ ಬೇಕೆ ಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ., ಆಕಸ್ಮಿಕ ಅವಘಡಗಳು ಸಂಭವಿಸಿದಾಗ ದೂರದ ಕುಮಟಾ ಅಥವಾ ಅಂಕೋಲಾದಿಂದ ಅಗ್ನಿಶಾಮಕ ದಳದವರು ಬಂದು ಕಾರ್ಯಾಚರಣೆ ನಡೆಸುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇದೆ ಎನ್ನುವ ಮಾತನ್ನು ಅಲ್ಲಗಳೆಯುವಂತಿಲ್ಲ.

ಗೋಕರ್ಣದ ಕಡಲ ತೀರಗಳು ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದು  ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ನಾನಾ ರೀತಿಯ  ಅವಘಡಗಳು ಸಂಭವಿಸಿವೆ, ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಪರಿಣಿತ ಅಗ್ನಿ ಶಾಮಕ ಸಿಬ್ಬಂದಿಗಳು ಲಭ್ಯವಿದ್ದರೆ, ಜನ ಜಾನುವಾರುಗಳ ಪ್ರಾಣ ರಕ್ಷಣೆ, ಇತರೆ ಸ್ವತ್ತು ರಕ್ಷಣಗೆ ತುರ್ತು ಕ್ರಮ ಕೈಗೊಳ್ಳಲು ಸಂಬಂಧಿಸಿದ ಇತರೆ ಇಲಾಖೆಗಳಿಗೂ ಸಹಕಾರಿಯಾಗುತ್ತದೆ. ಎನ್ನುವುದು ಸ್ಥಳೀಯರ ಅನಿಸಿಕೆಯಾಗಿದೆ.

ಈ   ಕುರಿತಂತೆ ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಿ,ಗೋಕರ್ಣದಲ್ಲಿ ಅಗ್ನಿಶಾಮಕ ಠಾಣೆ,ಅಥವಾ ಸಹಾಯಕ ಘಟಕ ಆರಂಭಿಸಿ ಸಾರ್ವಜನಿಕ ಕಳಕಳಿ ತೋರ್ಪಡಿಸಬೇಕಿದೆ.                     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Exit mobile version