ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಅವರಿಗೆ ಮದರ್ ಥೆರೆಸಾ ಮೆಮೋರಿಯಲ್ ಪ್ರಶಸ್ತಿ ಪ್ರದಾನ

ಅಂಕೋಲಾ: ಮದರ್ ತೆರೆಸಾ ಅವರ ಸ್ಮರಣಾರ್ಥ ಸಮಾಜಿಕ ಸೇವಾಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮುಂಬೈನ ಹಾರ್ಮೋನಿ ಫೌಂಡೇಶನ್ ವತಿಯಿಂದ ನೀಡಲ್ಪಡುವ ಮದರ್ ಥೆರೆಸಾ ಮೆಮೋರಿಯಲ್ ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೋಲಾದ ತುಳಸಿ ಗೌಡ ಅವರಿಗೆ ನೀಡಿ ಗೌರವಿಸಲಾಗಿದೆ.

ಮುಂಬೈನ ರಾಜಭವನದಲ್ಲಿ ಸೋಮವಾರ ನಡೆದ ಹಾರ್ಮೋನಿ ಫೌಂಡೇಶನ್ ನ ಅಂತರಾಷ್ಟ್ರೀಯ ಸಮಾವೇಶದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಸ್ಯಾರಿ ಅವರು 17 ನೇ ವರ್ಷದ ಪ್ರಶಸ್ತಿಯನ್ನು ತುಳಸಿ ಗೌಡ ಅವರಿಗೆ ನೀಡಿ ಗೌರವಿಸಿದರು.ಈ ಹಿಂದೆ ಬೌದ್ದ ಗುರು ದಲೈ ಲಾಮಾ,ಮಾನವ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್, ಮಲೇಶಿಯಾ ಪ್ರಧಾನಿ ಮಹತೀರ್ ಮಹಮ್ಮದ್, ಅಣ್ಣಾ ಹಜಾರೆ, ಸುಧಾ ಮೂರ್ತಿ,ಮೇಧಾ ಪಾಟ್ಕರ್  ಸೇರಿದಂತೆ 16 ಜನರು ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದು ತುಳಸಿ ಗೌಡ ಅವರು ಕರ್ನಾಟಕದಿಂದ ಪ್ರಶಸ್ತಿ ಪಡೆದ ಎರಡನೇ  ಮಹಿಳೆಯಾರಿದ್ದಾರೆ.

ತುಳಸಿ ಗೌಡ ಅವರು ಪರಿಸರ ಸಂರಕ್ಷಣೆಗೆ  ಸಲ್ಲಿಸಿರುವ ಕೊಡುಗೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹಾರ್ಮೋನಿ ಫೌಂಡೇಶನ್ ಅಧ್ಯಕ್ಷ ಡಾ.ಅಬ್ರಾಹಂ ಅವರು ಸಮಾವೇಶದಲ್ಲಿ ತಿಳಿಸಿದರು.ಮಾಯಾನಗರಿ ಮುಂಬೈಯಲ್ಲಿ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ವಿವಿಧ   ಕ್ಷೇತ್ರದ ಗಣ್ಯರು,ತುಳಸಿ ಗೌಡರ ಕುಟುಂಬ ವರ್ಗದವರು , ಇತರರು ಪಾಲ್ತೊಂಡಿದ್ದರು.                       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version