ಅಂಕೋಲಾ: ತಾಲೂಕಿನ ವೈಶಿಷ್ಟ್ಯಪೂರ್ಣ, ಸಾಂಪ್ರದಾಯಿಕ ಹಾಗೂ ವಿಶೇಷ ಧಾರ್ಮಿಕ ಆಚರಣೆಗಳಲ್ಲೊಂದಾದ ದೊಡ್ಡ ಕಾರ್ತಿಕ ಉತ್ಸವ – ವನಭೋಜನ ಕಾರ್ಯಕ್ರಮ ಮಂಗಳವಾರ ಅತ್ಯಂತ ಸಡಗರ- ಸಂಭ್ರಮದಿಂದ ನಡೆಯುತ್ತಿದೆ.ತಾಲೂಕಿನ ದೊಡ್ಡ ದೇವರೆಂದೇ ಖ್ಯಾತವಾದ ಶ್ರೀವೆಂಕಟರಮಣ, ಭೂಮಿತಾಯಿ ಶ್ರೀ ಶಾಂತಾದುರ್ಗಾ, ಶಕ್ತಿ ದೇವತೆ ಶ್ರೀಆರ್ಯಾದುರ್ಗ,ವೈಕುಂಠವಾಸಿ ಶ್ರೀ ನಾರಾಯಣ, ಶ್ರೀಮಹಾದೇವ ಹೀಗೆ ಪಂಚದೇವರುಗಳ ಪಲ್ಲಕಿ ಮೆರವಣಿಗೆ ಆಯಾ ದೇವಸ್ಥಾನಗಳಿಂದ ಹೊರಟು,ಪಟ್ಟಣದ ಮುಖ್ಯ ರಸ್ತೆ ಮಾರ್ಗವಾಗಿ, ಪಂಚ ವಾದ್ಯ,ಮತ್ತಿತರ ವಾದ್ಯಗಳು, ಛತ್ರ,ಚಾಮರಗಳೊಂದಿಗೆ ಮೆರವಣಿಗೆ ಹೊರಟು ಅಂಬಾರಕೊಡ್ಲ ಮಾರ್ಗದ ಮೂಲಕ ಬಾಳೇಗುಳಿ ಬಳಿ ರಾ.ಹೆ 66 ನ್ನು ದಾಟಿ ಹಳ್ಳದ ಅಂಚಿನ ವನ ಪ್ರದೇಶಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನ ಪೂರೈಸಿ ವನಭೋಜನ ಕಾರ್ಯಕ್ರಮ ನಡೆಯಿತು.
ದೇವಾಲಯಗಳ ಆಡಳಿತ ಮಂಡಳಿಯವರು, ಭಕ್ತರು, ಇತರೆ ಪ್ರಮುಖರು,ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀ ದೇವರ ಪ್ರಸಾದ ಭೋಜನ ನಡೆಯಿತು..ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಅಂಬಾರಕೊಡ್ಲ ರಸ್ತೆಯ ನಾರಾಯಣ ದೇವಾಲಯದ ಬಳಿ ಆಗಮಿಸಿ ಐದು ದೇವರ ಪಲ್ಲಕಿ ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.ಅಂಬಾರಕೊಡ್ಲದಿಂದ ಶಿರಕುಳಿ ವರೆಗೆ ವಿವಿಧ ಬಗೆಯ ಆಕರ್ಷಕ ತಳಿರು ತೋರಣಗಳು ಗಮನ ಸೆಳೆದವು.ಮಳೆಯ ಕಾರಣದಿಂದ ಕಳೆದ ತಿಂಗಳು ನಡೆಯಬೇಕಿದ್ದ ದೊಡ್ಡ ಕಾರ್ತಿಕ ವನಭೋಜನವನ್ನು ಒಂದು ತಿಂಗಳ ನಂತರ ನಡೆಸಲಾಗಿದ್ದು ವಿವಿಧ ಕಾರಣಗಳಿಂದ ದೇವರ ವಿಶೇಷ ಆಚರಣೆ ಇಲ್ಲದೇ ಕೊಂಚ ನಿರಾಶೆಯಲ್ಲಿದ್ದ ಹಲವು ಭಕ್ತರು,ದೇವರ ಉತ್ಸವ ,ಆಚರಣೆಯಲ್ಲಿ ಪಾಲ್ಗೊಂಡು ಸಂತಸಪಟ್ಟರು.ಪಿಎಸ್ಐ ಪ್ರೇಮ ಗೌಡ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ಕಾರ್ಯ ನಡೆಸಿದರು.ಬೆಳಗಿನ ಜಾವ ವಿವಿಧ ಧಾರ್ಮಿಕ ಸಂಪ್ರದಾಯಗಳೊಂದಿಗೆ ಕಾರ್ತಿಕೋತ್ವವ್ ಸಂಪನ್ನ ಗೊಳ್ಳಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ