Important
Trending

ಹೆಚ್ಚುತ್ತಿರುವ ಜೇನು ಕಡಿತ ಪ್ರಕರಣ: ಜೇನು ದಾಳಿಗೆ ತುತ್ತಾದ ಅಬಕಾರಿ ಇಲಾಖೆಯ ಹಿರಿಯ ಪೇದೆ ನಿಧನ

ಅಂಕೋಲಾ:ಇತ್ತೀಚಿಗೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಜೇನು ಕಡಿತದ ಪ್ರಕರಣಗಳು ಹೆಚ್ಚುತ್ತಲೇ ಇದ್ದು,ಅದೃಷ್ಟವಶಾತ್ ಜೇನಿನಿಂದ ಕಡಿತಕ್ಕೊಳಗಾದವರು ಬಹುತೇಕರು ಚೇತರಿಸಿಕೊಂಡಿದ್ದಾರೆ.  ತಾಲೂಕಿನ ಅಬಕಾರಿ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ,  ಹಸನ್ ಖಾನ್ ಕರೀಂ ಖಾನ್ ರ (46 )ಮೇಲೆ ಬುಧವಾರ ಹುಲಿದೇವರವಾಡ – ನೀಲಂಪುರ ಹತ್ತಿರ ಅಚಾನಕ್ ಆಗಿ ಎಲ್ಲಿಂದಲೋ ಬಂದ ಜೇನು ನೊಣಗಳು ಗುಂಪು ದಾಳಿ ಮಾಡಿದ್ದವು.

ಜೇನು ಕಡಿತಕ್ಕೊಳಗಾದ ಅವರನ್ನು ತಾಲೂಕ ಆಸ್ಪತ್ರೆಗೆ ದಾಖಲಿಸಿ,ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ತೀವ್ರ ಜೇನು ಕಡಿತ ಮತ್ತಿತರ ಸಮಸ್ಯೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದಂತಿದ್ದು ,ಚಿಕಿತ್ಸೆ ಫಲಕಾರಿಯಾಗದೆ ದುರದೃಷ್ಟವಶಾತ್ ಹಸನ್ ಖಾನ್ ಗುರುವಾರ ನಿಧನರಾಗಿದ್ದಾರೆ.       

ಈ ಹಿಂದೆಯಲ್ಲಾಪುರದಲ್ಲಿ ಅಬಕಾರಿ ಪೇದೆಯಾಗಿದ್ದ ಇವರು ಕಳೆದ ಹತ್ತು ತಿಂಗಳ ಹಿಂದೆ,ಬಡ್ತಿ ಪಡೆದು ಮುಖ್ಯ ಪೇದೆಯಾಗಿ ಅಂಕೋಲಾ ಅಬಕಾರಿ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಅಂಕೋಲಾ  ಅಬಕಾರಿ ನಿರೀಕ್ಷಕ ರಾಹುಲ ನಾಯಕ ಹಾಗೂ ಕಚೇರಿ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

ಹವಾಮಾನ ವೈಪರೀತ್ಯ,ಪ್ರಾಣಿ-ಪಕ್ಷಿಗಳು ,ಹಾಗೂ ಕಿಡಿಗೇಡಿ ಮಾನವರಿಂದ ಜೇನುಗೂಡಿಗೆ ಹಾನಿಯಾದಾಗ ರೊಚ್ಚಿಗೇಳುವ ಜೇನುನೊಣಗಳು ಪ್ರಾಣಿ ಹಾಗೂ ಮಾನವರ ಮೇಲೆ ದಾಳಿ ಮಾಡುತ್ತವೆ ಎನ್ನಲಾಗಿದ್ದು,ಸಾರ್ವಜನಿಕರು ಈ ಕುರಿತು ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದರಿಂದ ತೆಗೆದುಕೊಳ್ಳಬೇಕಿದೆ.ಅಂತೆಯೇ ಸಂಬಂಧಿಸಿದ ಇಲಾಖೆಗಳು ಸಾರ್ವಜನಿಕ ಓಡಾಟದ ಸ್ಥಳಗಳಲ್ಲಿ,ಹಾಗೂ ಅಕ್ಕಪಕ್ಕ ಜೇನುಗೂಡು ಕಂಡು ಬಂದಲ್ಲಿ,ಅದರ ತೆರವಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸಾರ್ವಜನಿಕರು ಸಹ ಇಂತಹ ವಿಷಯಗಳನ್ನು ಇಲಾಖೆಯ ಗಮನಕ್ಕೆ ತಂದು,ಸಂಭಾವ್ಯ ಅಪಾಯ ತಪ್ಪಿಸಬೇಕಿದೆ. ಪಟ್ಟಣದ ಅಭಿ ಡ್ರೆಸ್ ಲ್ಯಾಂಡ್ ಎದುರಿನ ಬಾಬಾ ಎನ್ನುವವರ ಮನೆ ಕಂಪೌಂಡ್ ಒಳಗಡೆ ಇರುವ ತೆಂಗಿನ ಮರವೊಂದಕ್ಕೆ ಹೆಜ್ಜೇನು ಗೂಡು ಕಂಡುಬರುತ್ತಿದ್ದು,  ಸಂಬಂಧಿಸಿದವರು. ಮತ್ತು ಇಲಾಖೆ ಜೇನು ಗೂಡು ತೆರವು ಗೊಳಿಸಿ, ಅಕ್ಕಪಕ್ಕದ ಅಂಗಡಿಕಾರರು ಮತ್ತು ನಿವಾಸಿಗಳ ಆತಂಕ ದೂರ ಮಾಡಬೇಕಿದೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button