ಅಂಕೋಲಾ: ಫೋರ್ಡ್ ಕಂಪನಿಯ ಕಾರೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ವಿವಿಧ ಕಂಪನಿಗಳ ಹತ್ತಾರು ಬ್ರ್ಯಾಂಡ್ ನ ಸರಾಯಿ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಅಂಕೋಲಾ ಪೊಲೀಸರು, ಕಾರಿನಲ್ಲಿದ್ದ ಸುಮಾರು 35,499 ರೂಪಾಯಿ ಮೌಲ್ಯದ ಸರಾಯಿ ವಶಕ್ಕೆ ಪಡೆದುಕೊಂಡು, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಜಪ್ತಿ ಪಡಿಸಿಕೊಂಡ ಕಾರಿನ ಮೌಲ್ಯ 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಓ.ಟಿ, ಬ್ಯಾಗ್ ಪೈಪರ್,ಒರಿಜಿನಲ್ ಚಾಯ್ಸ್, ಹೈವರ್ಡ್ ವಿಸ್ಕಿ ಸ್ಯಾಚೆಟ್ ಗಳು , ಕಿಂಗ್ ಫಿಶರ್ ಪ್ರೀಮಿಯರ್ ಮತ್ತು ಯು.ಬಿ ಎಕ್ಸ್ ಪೋರ್ಟ್ ಬಿಯರ್ ಟಿನ್ ಗಳು ಸೇರಿ ನಾನಾ ಬ್ರ್ಯಾಂಡಗಳ ವಿಸ್ಕಿ ಸ್ಯಾಬೆಟ್ ಗಳು ಹಾಗೂ ಬಿಯರ್ ಟಿನ್ ಗಳನ್ನು ಮಾದನಗೇರಿಯಿಂದ ಕಾರಿನಲ್ಲಿ ಆಕ್ರಮವಾಗಿ ಅಂಕೋಲಾ ಮಾರ್ಗವಾಗಿ ಸಾಗಿಸುತ್ತಿದ್ದರು ಎನ್ನಲಾಗಿದೆ.
ಕಾರು ಚಾಲಕ ಶಿವಮೊಗ್ಗ ಮೂಲದ ಅಭಿಷೇಕ (22), ಉಡುಪಿ ಮೂಲದ ಕ್ಯಾಶಿಯರ್ ವೃತ್ತಿಯ ಚಂದ್ರಶೇಖರ (52), ಮತ್ತು ಅಂಕೋಲಾ ತಾಲೂಕಿನ ಸುಂಕಸಾಳ ಮೂಲದ ಕೂಲಿ ಕೆಲಸಗಾರ ಸಂಕೇತ (20) ಈ ಮೂವರೂ ಬಿಳಿ ಬಣ್ಣದ ಫೋರ್ಡ್ ಕಾರಿನಲ್ಲಿ ಅಕ್ರಮ ಸರಾಯಿ ಸಾಗಾಟ ಮಾಡುತ್ತಿದ್ದಾಗ, ಸುಂಕಸಾಳ (ಕೋಟೆ ಪಾಲ ) ಬಳಿ ಪೋಲಿಸರು ದಾಳಿ ನಡೆಸಿದ್ದರು. ಸಿಪಿಐ ಸಂತೋಷ್ ಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಂಕೋಲಾದ ಬಹುತೇಕ ಹಳ್ಳಿಗಳ ಗಲ್ಲಿ ಗಲ್ಲಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬೇಕಾಬಿಟ್ಟಿ ಅಕ್ರಮ ಸರಾಯಿ ಮಾರಾಟ ಹಾಗೂ ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ಅಲ್ಲಲ್ಲಿ ಜೋರಾಗಿ ಕೇಳಿ ಬರುತ್ತಲೇ ಇದೆ. ಬೇರೆ ಬೇರೆ ಕಡೆಯ ಬಾರ್ ಗಳು, ವೈನ್‌ಶಾಪ್ ಹಾಗೂ ಸರ್ಕಾರಿ ಸ್ವಾಮ್ಯದ ಎಂ.ಎಸ್. ಐ ಐಲ್ ಮಳಿಗೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ವ್ಯವಸ್ಥಿತ ಸರಾಯಿ ಸಾಗಾಟ ಮಾಡುವ ಜಾಲ ಬೇರುಬಿಟ್ಟಿದೆ ಎನ್ನಲಾಗಿದ್ದು, ಪೊಲೀಸ್ ಹಾಗೂ ಸಂಬಂಧಿತ ಇತರ ಇಲಾಖೆಗಳು ಅಕ್ರಮ ಸರಾಯಿ ಸಾಗಾಟ ಹಾಗೂ ಮಾರಾಟಗಾರರ ಮೇಲೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ ?.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ