ಅಂಕೋಲಾ: ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಗಿದು ಎರಡು ವರ್ಷಗಳು ಕಳೆಯುತ್ತಾ ಬಂದರೂ ತಾಲೂಕಿನ ಅತ್ಯಂತ ಜನನಿಬಿಡ ಸ್ಥಳವಾದ ಅವರ್ಸಾದಲ್ಲಿ ಇದುವರೆಗೆ ಬಸ್ ತಂಗುದಾಣ ನಿರ್ಮಿಸದೇ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಐ.ಆರ್.ಬಿ ಕಂಪನಿಗಳ ನಡುವಿನ ಸಮನ್ವಯತೆಯ ಕೊರತೆಯಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಲವಾರು ರೀತಿಯ ಆದ್ವಾನಗಳು ನಡೆಯುತ್ತಲೇ ಇದ್ದು, ಸರ್ವಿಸ್ ರೋಡ ಸಹ ಸರಿಯಾಗಿ ನಿರ್ಮಾಣವಾಗಿಲ್ಲ ಎನ್ನುವ ಮಾತು ಕೇಳಿಬಂದಿದೆ.
ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿ ಬರುತ್ತಿದ್ದು ಅವರ್ಸಾದಲ್ಲಿ ರಸ್ತೆ ಕಾಮಗಾರಿ ಮುಗಿಸಿ ಬಸ್ ತಂಗುದಾಣ ನಿರ್ಮಿಸದೇ ಎಡವಟ್ಟು ಮಾಡಿರುವುದು ಇದಕ್ಕೆ ಪುಷ್ಠಿ ಒದಗಿಸುತ್ತಿದೆ.
ಈ ಭಾಗದಲ್ಲಿ ಹಿಂದಿನಿಂದಲೂ ಇದ್ದ ಬಸ್ ತಂಗುದಾಣವನ್ನು ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆರುವುಗೊಳಿಸಲಾಗಿದ್ದು ಈಗ ಐ.ಆರ್. ಬಿ ಕಂಪನಿ ಅಲ್ಲಿ ತಂಗುದಾಣವೇ ಇರಲಿಲ್ಲ ಎಂದು ಇಲ್ಲ ಸಲ್ಲದ ನೆವ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎನ್ನಲಾಗಿದೆ.
ಬಸ್ ಸ್ಟಾಪ್ ಇಲ್ಲದ ಕಾರಣ ವಿದ್ಯಾರ್ಥಿಗಳೂ ಸೇರಿದಂತೆ ಈ ಭಾಗದಿಂದ ಪ್ರತಿದಿನ ಓಡಾಡುವ ನೂರಾರು ಜನರಿಗೆ ಎಲ್ಲಿ ನಿಲ್ಲುವುದು ಎನ್ನುವುದೇ ತಿಳಿಯುತ್ತಿಲ್ಲ, ಬಸ್ ಚಾಲಕರು ನಿರ್ದಿಷ್ಟವಾಗಿ ಎಲ್ಲಿ ಬಸ್ ನಿಲ್ಲಿಸುವುದು ಎಂದು ತಿಳಿಯದೇ ಹತ್ತಾರು ಅಡಿ ದೂರದಲ್ಲಿ, ರಸ್ತೆ ಮಧ್ಯೆಯೇ ಬಸ್ ನಿಲ್ಲಿಸುವುದರಿಂದ ಹಿರಿಯ ನಾಗರಿಕರು, ಮಕ್ಕಳು ಓಡಿ ಹೋಗಿ ಬಸ್ ಹತ್ತುವ ಪರಿಸ್ಥಿತಿ ಬಂದೊದಗಿದೆ.
ಸೋಮವಾರ ದಿನ ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಚಾಲಕ ಬಸ್ ಚಲಾಯಿಸಲು ಮುಂದಾದ ಘಟನೆ ಕುರಿತಂತೆ ಅಪಾಯಕಾರಿ ಪರಿಸ್ಥಿತಿಯ, ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಈ ರೀತಿಯ ಅಸಡ್ಡೆ ತೋರುವ ಚಾಲಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಶಾಂತೇಶ ನಾಯ್ಕ ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅವರ್ಸಾದಲ್ಲಿ ಬಸ್ ತಂಗುದಾಣ ನಿರ್ಮಿಸುವ ಕುರಿತು ಗ್ರಾಮಸ್ಥರು ಶಾಸಕಿ ರೂಪಾಲಿ ನಾಯ್ಕ ಅವರ ಗಮನಕ್ಕೂ ತಂದಿದ್ದು ಸಂಬಂಧಿಸಿದ ಅಧಿಕಾರಿಗಳು ಮತ್ತು ಐ.ಆರ್.ಬಿ ಕಂಪನಿ ಜೊತೆ ಮಾತನಾಡಿ ಒದಗಿಸುವ ಭರವಸೆ ನೀಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ