ಕೆ ಎ ಟಿ ಆದೇಶ : ಬಿಇಓ ಆಗಿ ಮುಂದುವರೆಯಲಿರುವ ಶ್ಯಾಮಲಾ ನಾಯಕ ? ಫುಟ್ಬಾಲ್ ಚೆಂಡಿನಂತಾದ ಮಹತ್ತರ ಹುದ್ದೆ ?

ಅಂಕೋಲಾ: ಕಳೆದ ಕೆಲ ತಿಂಗಳು ಮೊದಲು ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಿಸ್ತು ಕ್ರಮದ ಹೆಸರಿನಲ್ಲಿ ಅಮನಾತ್ತುಗೊಂಡಿದ್ದ ಶ್ಯಾಮಲಾ ನಾಯಕ ಅವರ ಅಮಾನತ್ತು ಆದೇಶವನ್ನು ರದ್ದುಪಡಿಸಿ, ಕರ್ನಾಟಕ ಆಡಳಿತ ನ್ಯಾಯ ಮಂಡಳಿ ( ಕೆ ಎ ಟಿ )ಆದೇಶ ನೀಡಿದೆ ಎನ್ನಲಾಗಿದ್ದು, ಈ ಮೂಲಕ ಬಿ ಇ ಓ ಅಗಿ ಶ್ಯಾಮಲಾ ನಾಯಕ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಅಂಕೋಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಾರ್ಚ್ 2019 ರಿಂದ ಕಾರ್ಯ ನಿರ್ವಹಿಸುತ್ತಿರುವ ಶ್ಯಾಮಲಾ ನಾಯಕ ಅವರ ಮೇಲೆ ಸ್ವೀಕೃತಿ ದೂರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿಗಳು ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಿದ್ದರಿಂದ ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತನಿಖೆ ನಡೆಸಿ ವರದಿ ನೀಡಿದ್ದರು. ಕಳೆದ ಸೆಪ್ಟೆಂಬರ್ 28 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗಳು ಅಮಾನತ್ತಿಗೆ ಆದೇಶ ಹೊರಡಿಸಿದ್ದರು.

ಈ ಕುರಿತು ಶ್ಯಾಮಲಾ ನಾಯಕ ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರಿಂದ ವಿಚಾರಣೆ ನಡೆಸಿ ದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನ್ಯಾಯಮೂರ್ತಿ ಟಿ.ನಾರಾಯಣಮೂರ್ತಿ, ಶ್ಯಾಮಲಾ ನಾಯಕ ಅವರ ಪರವಾಗಿ ನ್ಯಾಯವಾದಿ ಅರವಿಂದ ಉಪಾಧ್ಯಾಯ ಅವರ ವಾದಗಳನ್ನು ಪರಿಗಣಿಸಿ ಶ್ಯಾಮಲಾ ನಾಯಕ ಅವರನ್ನು ಅಮನಾತ್ತುಗೊಳಿಸಿದ
ಸರ್ಕಾರದ ಕ್ರಮ ಸರಿಯಲ್ಲ ಎಂದು ನಿರ್ಣಯಿಸಿ ಶ್ಯಾಮಲಾ ನಾಯಕ ಅವರನ್ನು ಅಂಕೋಲಾ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೇ ನಿಯುಕ್ತಿಗೊಳಿಸುವಂತೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಶ್ಯಾಮಲಾ ನಾಯಕ ಅಮಾನತ್ತ ಆದ ತರುವಾಯ ಅವರ ಸ್ಥಾನದಲ್ಲಿ ಪ್ರಭಾರಿಯಾಗಿ ಬಿ ಆರ್ ಸಿ ಯ ಹರ್ಷಿತಾ ನಾಯಕ ಕಾರ್ಯನಿರ್ವಹಿಸಿದ್ದು, ಅದಾದ ಬಳಿಕ ಕಳೆದ ಕೆಲ ದಿನಗಳ ಹಿಂದಷ್ಟೇ,ಮಂಗಳ ಲಕ್ಷ್ಮಿ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ್ದರು.

ಕೆ ಎ ಟಿ ಆದೇಶದಿಂದ ಶ್ಯಾಮಲಾ ನಾಯಕ ಈ ಮೊದಲಿನಂತೆ ಅಂಕೋಲಾದ ಕ್ಷೇತ್ರ ಶಿಕ್ಷಣ ಅಧಿಕಾರಿಯಾಗಿ ಅಧಿಕಾರ ಮುಂದುವರಿಸಲಿದ್ದಾರೆ ಎನ್ನಲಾಗಿದ್ದು, ಹಾಗೊಮ್ಮೆ ಆದರೆ ಮಂಗಳಲಕ್ಷ್ಮಿ ಪಾಟೀಲ,ತಮ್ಮ ಈ ಮೊದಲಿನ ಹುದ್ದೆ (ಕಾರವಾರದ ವಯಸ್ಕರ ಶಿಕ್ಷಣಾಧಿಕಾರಿ) ಸ್ಥಾನಕ್ಕೆ ಮರಳಬೇಕಾಗುತ್ತದೆ ಎನ್ನಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಕ್ಷೇತ್ರ ಶಿಕ್ಷಣ ಅಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಅಂಕೋಲಾದಲ್ಲಿ ನಾನಾ ರೀತಿಯ ಉಹಾ – ಪೋಹಗಳು,ಒಳ ತಂತ್ರಗಾರಿಕೆ,ಮತ್ತಿತರ ಜಿದ್ದಾಜಿದ್ದಿ ನಡೆಯುತ್ತ ಬಂದಿದೆ ಎನ್ನುವ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ನಡುವೆಯೇ,ತಾಲೂಕಿನ ಪ್ರತಿಷ್ಠಿತ ಹುದ್ದೆ ಪುಟ್ಬಾಲ್ ಚೆಂಡಿನಂತೆ ಅಲ್ಲಿಂದಿಲ್ಲಿಗೆ ಓಡಾಡುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದು,ಕೆಎಟಿ ಸ್ಪಷ್ಟ ಆದೇಶದಿಂದ ಮುಂದಿನ ಕೆಲ ದಿನಗಳಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version