ದಾಂಡೇಲಿ: ಕೈಕಾಲು ತೊಳೆಯಲು ಕಾಳಿ ನದಿಯ ದಂಡೆಗೆ ಬಂದಿದ್ದ 24 ವರ್ಷದ ಯುವಕನನ್ನು ಮೊಸಳೆ ಎಳೆದೊಯ್ದ ಘಟನೆ ಇಲ್ಲಿನ ಪಟೇಲನಗರದ ಹತ್ತಿರದಲ್ಲಿನ ಹಿಂದೂಗಳ ರುದ್ರಭೂಮಿಯ ಬಳಿ ನಡೆದಿದೆ. ಕಾಳಿ ನದಿಯ ದಂಡೆಯಲ್ಲಿ ಕೈಕಾಲು ತೊಳೆಯುತ್ತಿದ್ದ ಆರ್ಷದ್ ಖಾನ್ ರಾಯಚೂರ ಎಂಬ ಯುವಕನ ಮೇಲೆ ಮೊಸಳೆ ಏಕಾಏಕಿ ಜಿಗಿದು ದಾಳಿ ಮಾಡಿ ನೀರಿಗೆಳೆದೊಯ್ದಿದೆ.
ಯುವಕ ವೃತ್ತಿಯಲ್ಲಿ ಫ್ಯಾಬ್ರಿಕೇಟರ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಗರಸಭೆಯ ಸದಸ್ಯರು ದೌಡಾಯಿಸಿದ್ದಾರೆ. ಶೋಧ ಕಾರ್ಯಚರಣೆ ನಡೆಸುವ ರಾಫ್ಟಿಂಗ್ ತಜ್ಞರಿಗೆ ಮಾಹಿತಿ ನೀಡಲಾಗಿದೆ.
ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚರುವುದರಿಂದ ಸೂಪಾ ಜಲಾಶಯದಿಂದ ನೀರನ್ನು ಬಿಡದಂತೆ ಜಲಾಶಯದ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಶೈಲೇಶ ಪರಮಾನಂದ ತಿಳಿಸಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾವಣೆಯಾಗಿದ್ದಾರೆ. ಕಳೆದ ಎರಡುವರೆ ತಿಂಗಳ ಹಿಂದೆ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿ ಬಾಲಕನನ್ನು ಮೊಸಳೆ ಬಲಿ ಪಡೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ವಿಸ್ಮಯ ನ್ಯೂಸ್, ಕಾರವಾರ