ಕಾರವಾರ: ಶಿರಸಿ ತಾಲ್ಲೂಕಿನ ಬಾಳೆಗದ್ದೆಯಲ್ಲಿ ಹೊನ್ನಾವರ ತೊಪ್ಪಲಕೇರಿ ಸಂದೀಪ್ ಮುಕ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವಿನ ಬಗ್ಗೆ ಸಂಶಯವಿದ್ದು ತನಿಖೆ ನಡೆಸಬೇಕು ಎಂದು ಸಂದೀಪ್ ಅವರ ತಾಯಿ ದೇವಿ ಮಾಸ್ತಿ ಮುಕ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ತನ್ನ ಮಗ ಸಂದೀಪ ಮತ್ತು ಶಿರಸಿ ಬಾಳೆಗದ್ದೆಯ ರಮ್ಯಾ ಮುಕ್ರಿ ಅವರನ್ನು ಕಳೆದ ಮೂರು ವರ್ಷಗಳಿಂದ ಪ್ರೀತಿಸಿದ್ದ.
ರಮ್ಯಾ ಅವರು ಹೊನ್ನಾವರ ಠಾಣೆಗೆ ದೂರು ಕೊಟ್ಟ ನಂತರವೇ ಸಂದೀಪ ಅವರು ರಮ್ಯ ಅವಳನ್ನು ಪ್ರೀತಿಸುತ್ತಿದ್ದ ಎನ್ನುವ ವಿಷಯ ನಮೆಗೆ ಗೊತ್ತಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರಮ್ಯಾ ಅವರು ಸಂದೀಪನನ್ನು ವಿವಾಹ ಆಗುವುದಾಗಿ ಒಪ್ಪಿದ್ದಳು.
ಅನಾರೋಗ್ಯದ ಕಾರಣ ಎರಡು ತಿಂಗಳ ಬಳಿಕ ಮದುವೆ ಆಗುವುದಾಗಿ ಆಕೆ ತಿಳಿಸಿ ದ್ದಳು ಎಂದು ಮನವಿಯಲ್ಲಿ ಹೇಳ ಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಸಭೆ ನಡೆದ ಸಂದರ್ಭದಲ್ಲಿ ರಮ್ಯಾಳ ಸಂಬoಧಿಕರು ಸಂದೀಪನತ್ತ ನೋಡಿ, ನಿನಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ ಎಂದು ಆ ಸಂದರ್ಭದಲ್ಲಿ ಧಮಕಿ ಹಾಕಿದ್ದರು ಎಂದು ಅವರು ತಿಳಿಸಿದ್ದಾರೆ.
ಫೆ. 6ರಂದು ರಮ್ಯಾ ನಮಗೆ ರಾತ್ರಿ ಕರೆ ಮಾಡಿ ನಿಮ್ಮ ಮಗ ವಿಷ ಕುಡಿದಿದ್ದಾನೆ. ಶಿರಸಿ ಪೊಲೀಸರು ಕಾರವಾರದ ಆಸ್ಪತ್ರೆಗೆ ಕರೆದು- ಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಳು. ನಾನು ಮಗನ ಸ್ನೇಹಿತನನ್ನು ಕಾರವಾರದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆ. ಆದರೆ ಆಸ್ಪತ್ರೆಯಲ್ಲಿ ಸಂದೀಪ ಇರಲಿಲ್ಲ. ಅದೇ ದಿನ ರಾತ್ರಿ 11.30ಕ್ಕೆ ಮಗನ ಮೊಬೈಲ್‌ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ನಿಮ್ಮ ಮಗ ಕಾರವಾರ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದರು ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಫೆ. 7ರಂದು ಬೆಳಿಗ್ಗೆ 7.30ಕ್ಕೆ ರಮ್ಯಾಗೆ ಕರೆ ಮಾಡಿದಾಗ ಬೇರೆ ವ್ಯಕ್ತಿಯೊಬ್ಬರು ಕರೆ ಸ್ವೀಕರಿಸಿ, ನಿಮ್ಮ ಮಗ ನಮ್ಮ ಮನೆಗೆ ಬಂದುಮಲಗಿದ್ದಾನೆ. ಕೂಡಲೇ ನೀವು ನಿಮ್ಮ ಸಮುದಾಯದವರನ್ನು ಕರೆದು- ಕೊಂಡು ಬಂದು ರಾಜಿ ಪಂಚಾಯಿತಿ ಮಾಡಿ ಎಂದು ತಿಳಿಸಿದ್ದಾರೆ. ನಾವು ಅಲ್ಲಿಗೆ ನೋಡಿದಾಗ ಮೃತ ಸ್ಥಿತಿಯಲ್ಲಿ ಮಗನ ದೇಹ ನೋಡಿದೆ ಎಂದು ಅವರು ತಿಳಿಸಿದ್ದಾರೆ.
ನನ್ನ ಮಗ ಮನಸಿಕವಾಗಿ ಸದೃಢನಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮನೋಸ್ಥಿತಿ ಹೊಂದಿರಲಿಲ್ಲ. ಮಗನನ್ನು ಪ್ರೀತಿಯ ಬಂಧನದಿoದ ತಪ್ಪಿಸಬೇಕು ಎನ್ನುವ ಕಾರಣದಿಂದ ಕೊಲೆ ಮಾಡಲಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ