ಕಾಲೇಜಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಗುದ್ದಿದ ಸಾರಿಗೆ ಸಂಸ್ಥೆಯ ಬಸ್: ಚಾಲಕನ ವಿರುದ್ಧ ಆಕ್ರೋಶ ಕೇಳಿಬರುತ್ತಿರುವುದೇಕೆ?

ಕಾಲೇಜಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಸಾರಿಗೆ ಸಂಸ್ಥೆಯ ಬಸ್ ಬಡಿದ ಪರಿಣಾಮ ವಿದ್ಯಾರ್ಥಿನಿ ಅಸ್ವಸ್ಥಗೊಳ್ಳುವಂತಾಗಿದ್ದು,ಘಟನೆ ನಂತರ ವಿದ್ಯಾರ್ಥಿನಿಯಿಂದಲೇ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದ ಚಾಲಾಕಿ ಚಾಲಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಸಾರಿಗೆ ಸಂಸ್ಥೆ ಬಸ್ ,ವಿದ್ಯಾರ್ಥಿನಿಗೆ ಅಪಘಾತ ಪಡಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಚತುಷ್ಪತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ಹಲವು ವರ್ಷಗಳೇ ಕಳೆದರೂ ಅವರ್ಸಾದಲ್ಲಿ ಈ ವರೆಗೆ ಬಸ್ ತಂಗುದಾಣ ನಿರ್ಮಿಸಲಾಗಿಲ್ಲ. ಹಿಂದೆ ಇದ್ದ ತಂಗುದಾಣವನ್ನು ತೆರವುಗೊಳಿಸಲಾಗಿದ್ದು,ಪ್ರಯಾಣಿಕರಿಗೆ ಬಸ್ ಹತ್ತಲು ಇಳಿಯಲು ನಿರ್ದಿಷ್ಟ ಸ್ಥಳವಿಲ್ಲದೆ ಪರದಾಡುವಂತಾಗಿದೆ.

ಈ ಭಾಗದಲ್ಲಿ ಸರಿಯಾದ ಬೈಪಾಸ್ ರಸ್ತೆ ಸಹ ಇರದಿರುವುದರಿಂದ ಹೆದ್ದಾರಿಯಲ್ಲಿಯೇ ನಿಂತು ಬಸ್ ಏರಬೇಕಾದ ಅನಿವಾರ್ಯತೆ ಇದೆ. ಟ್ರಾಫಿಕ್ ಜಾಮ್ ಮತ್ತಿತರ ಕಾರಣಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಬಸ್ ನಿಲ್ಲಿಸಬೇಕಾದ ಅನಿವಾರ್ಯತೆಯೂ ಕಂಡುಬರುತ್ತದೆ. ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳು ಬಸ್ ಏರುತ್ತಿರುವಾಗಲೇ ಚಾಲಕ ಬಸ್ಸನ್ನು ಮುಂದೆ ಚಲಾಯಿಸಿದ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು.

ಈ ಅಪಾಯಕಾರಿ ಸನ್ನಿವೇಶದ ಕುರಿತು ಸ್ಥಳೀಯರು ಮಾಧ್ಯಮದ ಮೂಲಕ ಹೆದ್ದಾರಿ ಗುತ್ತಿಗೆದಾರ ಕಂಪನಿ ಹಾಗೂ ಸಾರಿಗೆ ಸಂಸ್ಥೆಯ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಆದರೆ ಸಂಬಂಧಿಸಿದವರಾರೂ ಇದು ಮಾಮೂಲಿ ಘಟನೆ ಎಂಬಂತೆ ಬೇಜವಾಬ್ದಾರಿ ತೋರಿದಂತೆ ಇದೆ. ಅವರ ಬೇಜವಾಬ್ದಾರಿಯಿಂದಾಗಿಯೇ ಇಂದು ವಿದ್ಯಾರ್ಥಿನಿಯೋರ್ವಳಿಗೆ ಬಸ್ ಬಡಿದು ಸ್ಥಳೀಯರ ಅತಂಕಕ್ಕೆ ಕಾರಣವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಆಗಿರುವ ಘಟನೆ ಬಗ್ಗೆ ವಿಷಾದಿಸಬೇಕಿದ್ದ
ಬಸ್ ಚಾಲಕ, ತನ್ನ ಚಾಲಾಕಿ ಬುಧ್ಧಿ ಉಪಯೋಗಿಸಿ, ಗಾಬರಿಗೊಂಡಿದ್ದ ವಿದ್ಯಾರ್ಥಿನಿಯ ಅಸಹಾಯಕತೆ ದುರುಪಯೋಗ ಪಡಿಸಿಕೊಂಡು,ಈ ಅಪಘಾತಕ್ಕೆ ಸಂಬಂಧಿಸಿದಂತೆ ಚಾಲಕನ ಯಾವುದೇ ತಪ್ಪಿಲ್ಲ, ತಪ್ಪು ತನ್ನದೇ ಎಂಬಂತೆ ವಿದ್ಯಾರ್ಥಿನಿ ಕಡೆಯಿಂದ ಬರೆಯಿಸಿಕೊಂಡು, ಅವಳ ಸಹಿ ಹಾಕಿಸಿಕೊಂಡು ತನ್ನ ಜೇಬಿನಲ್ಲಿ ಭದ್ರವಾಗಿ ಇರಿಸಿಕೊಂಡಿದ್ದ ಎನ್ನಲಾಗಿದೆ.

ಈ ವಿಷಯ ಸ್ಥಳೀಯರ ಗಮನಕ್ಕೆ ಬಂದಿದ್ದು ಚಾಲಕನನ್ನು ತರಾಟೆಗೆ ತೆಗೆದುಕೊಂಡು, ವಿದ್ಯಾರ್ಥಿನಿಯದ ಬರೆಯಿಸಿಕೊಂಡಿದ್ದ ಹೇಳಿಕೆ ಪತ್ರವನ್ನು ಮರಳಿ ಪಡೆದಿದ್ದಾರೆ ಎನ್ನಲಾಗಿದೆ. ಮತ್ತು ವಿದ್ಯಾರ್ಥಿನಿಯ ಪಾಲಕರು ಬರುವ ವರೆಗೆ ಬಸ್ ತಡೆಹಿಡಿದ್ದಾರೆ. ಪಾಲಕರು ಬಂದು ತಮ್ಮ ಮಗಳ ಆರೋಗ್ಯ ವಿಚಾರಿಸಲು ಮುಂದಾದಾಗ ಆಕೆಯ ಬಾಯಿಂದ ರಕ್ತ ಸುರಿಯುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ.

ತಕ್ಷಣ 112 ತುರ್ತು ವಾಹನದ ಮೂಲಕ ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.ತಲೆ ಭಾಗಕ್ಕೆ ಪೆಟ್ಟು ಬಿದ್ದಿರುವ ಸಾಧ್ಯತೆ ಇರುವುದರಿಂದ ಸ್ಕ್ಯಾನಿಂಗ್ ಗಾಗಿ ಹೊನ್ನಾವರಕ್ಕೆ ಸಾಗಿಸಿರುವುದಾಗಿ ತಿಳಿದು ಬಂದಿದೆ.

ಅವರ್ಸಾದಲ್ಲಿ ಬಸ್ ತಂಗುದಾಣ ಇಲ್ಲದ ಕಾರಣ ರಸ್ತೆ ಬದಿಯಲ್ಲಿ ನಿಂತು ಬಸ್ ಗಾಗಿ ಕಾಯಬೇಕಾಗಿದೆ, ಬಸ್ ಚಾಲಕರು ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸದೇ ಮನಸ್ಸಿಗೆ ಬಂದಲ್ಲಿ ಬಸ್ ನಿಲ್ಲಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹಣ ತುಂಬಿ ಬಸ್ ಪಾಸುಗಳನ್ನು ಪಡೆದರೂ ಬಸ್ ನಿಲ್ಲಿಸದೇ ದೂರ ಹೋಗಿ ನಿಲ್ಲಿಸುವುದು,ಬಸ್ ಹತ್ತುತ್ತಿರುವಾಗಲೇ ಬಸ್ ಚಲಾಯಿಸಿಕೊಂಡು ಹೋಗುವುದು, ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಹತ್ತಬೇಡಿ ಎಂದು ಹೇಳುವ ಮೂಲಕ ಕೀಳಾಗಿ ನೋಡುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ಗ್ರಾಮಸ್ಥರ ಪರವಾಗಿ ಶಿವಾ ನಾಯ್ಕ ಎನ್ನುವವರು ಧ್ವನಿ ಎತ್ತಿದ್ದಾರೆ.

ಪ್ರಮುಖರಾದ ಶಾಂತೇಶ ನಾಯ್ಕ, ರಾಜು ನಾಯಕ ಬೆಲೇಕೇರಿ, ಸಂಜೀವ ನಾಯ್ಕ ಹಟ್ಟಿಕೇರಿ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಗಣೇಶ ನಾಯ್ಕ ಮೊದಲಾದವರು ಘಟನಾ ಸ್ಥಳದಲ್ಲಿ ಹಾಜರಿದ್ದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬಸ್ ತಂಗುದಾಣ ನಿರ್ಮಾಣ ಮತ್ತಿತರ ನಾಗರಿಕ ಸುರಕ್ಷತೆ ದೃಷ್ಟಿಯಿಂದ ಈ ಭಾಗದಲ್ಲಿ ಈಗಲಾದರೂ ಸಂಬಂಧಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹೆದ್ದಾರಿ ಗುತ್ತಿಗೆದಾರ ಕಂಪನಿ ಹಾಗೂ ಸಾರಿಗೆ ಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿ . ಇಲ್ಲದಿದ್ದರೆ ಹೆದ್ದಾರಿ ತಡೆ ಮತ್ತಿತರ ಪ್ರತಿಭಟನೆಯ ಹಾದಿ ತುಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಈ ಊರಿನ ರಸ್ತೆ ಅಪಘಾತದಲ್ಲಿ ಕಾರ್ ಪ್ರಯಾಣಿಕ ವಿಕಲಚೇತನ ನೊಬ್ಬ ಅಸುನೀಗಿದ್ದನ್ನು ಸ್ಮರಿಸಬಹುದಾಗಿದೆ.ಇಂತಹ ದುರ್ಘಟನೆಗಳು ಮರುಕಳಿಸದಂತೆ ಸುಗಮ ಸಂಚಾರಕ್ಕೆ ಈ ಭಾಗದಲ್ಲಿ ಸೌಕರ್ಯಗಳ ಅಭಿವೃದ್ಧಿ ಆಗಬೇಕೆನ್ನುವುದು ನಾಗರಿಕರ ಆಗ್ರಹವಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version