ಅಂಕೋಲಾ:ತಾಲೂಕಿನ ಅಡಿಗೋಣ ಹೆಗ್ರೆಯಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿ ದೂರು ದಾಖಲಿಸಲಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರವಾಗಿ ಹೊಸ ತಿರುವು ಪಡೆದಿದೆ.
ಒಂದೇ ಕುಟುಂಬದ ನಾಲ್ವರು ಸೇರಿ ತಮ್ಮ ಮೇಲೆ ಮರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಡಿಗೋಣ ಹೆಗ್ರೆ ನಿವಾಸಿ ನಿತ್ಯಾನಂದ ವಿಠ್ಠಲ ರೇವಣಕರ್ (36) ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಡಿಗೋಣ ಹೆಗ್ರೆ ನಿವಾಸಿ ನಾರಾಯಣ ಪ್ರಭಾಕರ ಶೇಟ್ ಎಂಬಾತ ಫೆಬ್ರವರಿ 22 ರಂದು ದೇವಸ್ಥಾನದೊಳಗೆ ಮದ್ಯ ಸೇವನೆ ಮಾಡುತ್ತ ಕುಳಿತಿದ್ದವ,ನಿತ್ಯಾನಂದ ಅವರು ಬರುವುದನ್ನು ನೋಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮರುದಿನ ಫೆಬ್ರವರಿ 23 ರಂದು ಬೆಳಿಗ್ಗೆ ನಿತ್ಯಾನಂದ ಹೆಗ್ರೆ ಬಸ್ ನಿಲ್ದಾಣದ ಬಳಿ ವಾಕಿಂಗ್ ಮಾಡುತ್ತಿದ್ದಾಗ, ಆರೋಪಿ ನಾರಾಯಣ ಶೇಟ್, ಅವರ ತಂದೆ ಪ್ರಭಾಕರ ಶೇಟ್, ಅವರ ತಾಯಿ ಮತ್ತು ಸಹೋದರಿ ಸೇರಿ ಹಿಂಬದಿಯಿಂದ ಬಂದು, ನಿತ್ಯಾನಂದ ಅವರನ್ನು ದೂಡಿ ಹಾಕಿ, ಮಾರಣಾಂತಿಕ ಮೇಲೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರಿನಲ್ಲಿ ತಿಳಿಸಿದಂತೆ ಪ್ರಭಾಕರ ಶೇಟ್ ಅವರು ನಿತ್ಯಾನಂದನ ಕಾಲುಗಳನ್ನು ಹಿಡಿದುಕೊಂಡ ಸಂದರ್ಭದಲ್ಲಿ, ನಾರಾಯಣ ಶೇಟ್ ಈತನು ಮೆಟಲ್ ರಾಡಿನಿಂದ ತಲೆಯ ಹಿಂಬದಿಗೆ, ಮತ್ತು ಕೈಗೆ ಹೊಡೆದಿದ್ದು ,ಈ ಸಂದರ್ಭದಲ್ಲಿ ಪ್ರಭಾಕರ ಶೇಟ್ ಅಲ್ಲಿಯೇ ಪಕ್ಕದಲ್ಲಿ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತನ್ನ ತಲೆ ಮೇಲೆ ಹೊಡೆದು ತೀವ್ರ ಸ್ವರೂಪದ ಗಾಯ ಪಡಿಸಿದ್ದಲ್ಲದೇ, ಕೈಯನ್ನು ನೆಲದ ಮೇಲಿಟ್ಟು ಬೆರಳುಗಳನ್ನು ಕಲ್ಲಿನಿಂದ ಜಜ್ಜಿ, ಬೆರಳನ್ನು ಮುರಿದು ಹಾಕಿದ್ದಲ್ಲದೇ, ತಾನು ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವುದನ್ನು ನೋಡಿ, ಕೊಂಕಣಿಯಲ್ಲಿ ಜೀವ ಬೆದರಿಕೆ ಹಾಕಿದ್ದಾನೆ.
ಈ ಎಲ್ಲಾ ಅಂಶಗಳೊಳಗೊಂಡಿದ್ದು,ನಿತ್ಯಾನಂದ ರೇವಣಕರ್ ತೀವ್ರ ಗಾಯಗೊಂಡು, ರಕ್ತ ಸ್ರಾವವಾಗಿ ಅಸ್ವಸ್ಥಗೊಂಡ ಕಾರಣ,ಆಸ್ಪತ್ರೆಗೆ ದಾಖಲಾಗುವಂತಾಗಿ, ತನ್ನ ಮೇಲೆ ನಡೆದ ಹಲ್ಲೆ ಪ್ರಕರಣದ ಕುರಿತಂತೆ ಪೊಲೀಸ್ ದೂರು ದಾಖಲಿಸಲು, ಇಲ್ಲವೇ ಗಂಭೀರ ಗಾಯ ಮತ್ತಿತರ ಕಾರಣಗಳಿಂದ ಪೊಲೀಸರಿಗೆ ಹೇಳಿಕೆ ನೀಡಲು ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.
ಈ ಹಿಂದೆ ಪ್ರಭಾಕರ ಶೇಟ್ ಅವರ ಕುಟುಂಬದವರು ತಮ್ಮ ಮೇಲೆ ನಿತ್ಯಾನಂದ ಹಲ್ಲೆ ನಡೆಸಿದ್ದಾನೆ ಎಂಬಿತ್ಯಾದಿ ವಿಷಯಗಳನ್ನು ನಮೂದಿಸಿ ನಿತ್ಯಾನಂದ ಅವರ ಮೇಲೆ ದೂರು ನೀಡಿದ್ದರು. ನಂತರ ನಿತ್ಯಾನಂದ ಅವರ ಮೇಲೆ ಪೊಲೀಸ ಪ್ರಕರಣ ದಾಖಲಾಗಿತ್ತು. ಇದೀಗ ನಿತ್ಯಾನಂದ ಅವರಿಂದ ಪ್ರತಿದೂರು ದಾಖಲಾಗಿದ್ದು ಈ ಮೊದಲು ದೂರು ದಾಖಲಿಸಿ,ನಿತ್ಯಾನಂದನ ಮೇಲೆ ಆರೋಪಿಸಿದ ಶೇಟ್ ಕುಟುಂಬದ ನಾಲ್ವರೂ ,ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷದಲ್ಲಿ , ದೂರು – ಪ್ರತಿದೂರು ದಾಖಲಾಗಿದ್ದು, ಪೋಲೀಸ್ ತನಿಖೆಯಿಂದ ಘಟನೆ ಕುರಿತಂತೆ ಸತ್ಯಾ -ಸತ್ಯತೆಗಳು ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.