ಅಂಕೋಲಾ:ಎ.ಟಿ.ಎಂ ನಲ್ಲಿ ಹಣ ತೆಗೆಯಲು ಬಂದ ಮುಗ್ಧ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎ.ಟಿ.ಎಂ ಕಾರ್ಡ್ ಬದಲಾಯಿಸಿ, ನಂತರ ತಾನು ಅವರ ಖಾತೆಯಿಂದ ಹಣ ತೆಗೆದು ವಂಚಿಸುತ್ತಿದ್ದ ಅಂತರ್ ರಾಜ್ಯ ಆರೋಪಿಯನ್ನು ಅಂಕೋಲಾ ಪೊಲೀಸರ ತಂಡ ಅತ್ಯಂತ ಚಾಣಾಕ್ಷತೆಯಿಂದ ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಪ್ರಯಾಗರಾಜ ಜಿಲ್ಲೆಯ,ಮೇಜಾ ತಾಲೂಕಿನ ನಿವಾಸಿ ವಿಜಯ ಅಂಗಧಪ್ರಸಾದ ದ್ವಿವೇದಿ (34) ಬಂಧಿತ ಆರೋಪಿಯಾಗಿದ್ದು ,ಅಂತರ್ ರಾಜ್ಯ ವಂಚಕನಾದ ಈತ ಹಾಲಿ ವಸತಿಯನ್ನು ಮುಂಬೈನ ಅಂಧೇರಿಯ ಕುರ್ಲಾ ರಸ್ತೆಯಲ್ಲಿ ಮಾಡಿಕೊಂಡಿದ್ದು, ಬಾಡಿಗೆ ಕಾರ್ ನಲ್ಲಿ ದೇಶದ ವಿವಿಧ ಕಡೆಗಳಲ್ಲಿ ಸುತ್ತಾಡುತ್ತಾ ತನ್ನ ವಂಚನೆ ಖರಾಮತ್ತು ಮುಂದುವರಿಸಿ ಕೊಂಡಿದ್ದ ಎನ್ನಲಾಗಿದೆ.
ಕಳೆದ ಡಿಸೆಂಬರ್ 21 ರಂದು ಅಂಕೋಲಾ ತಾಲೂಕಿನ ಕೆ.ಸಿ.ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎ.ಟಿ.ಎಂ ನಲ್ಲಿ ಹಣ ತೆಗೆಯಲು ಹೋಗಿದ್ದ ಬೋಳೆ ಗ್ರಾಮದ ನಿವಾಸಿ ವಿಜೇತ ಕಿಶೋರ ನಾಯ್ಕ ಎನ್ನುವವರಿಗೆ , ಎಟಿಎಂ ಕೇಂದ್ರದಲ್ಲಿದ್ದುಕೊಂಡು ಸಹಾಯ ಮಾಡುವ ನೆಪದಲ್ಲಿ, ಕಿಶೋರನ ಅರಿವಿಗೆ ಬಾರದಂತೆ ಎ.ಟಿ.ಎಂ ಕಾರ್ಡ್ ಬದಲಾಯಿಸಿ, ತನ್ನ ಬಳಿ ಇರುವ ಬೇರೆ ಕಾರ್ಡನ್ನು ಕಿಶೋರ ನಾಯಕನಿಗೆ ನೀಡಿ ಮರಳು ಮಾಡಿದ್ದ.
ಎಟಿಎಂ ಮಷಿನ್ ಇಲ್ಲವೇ ಇತರೆ ತೊಂದರೆಯಿಂದ ಹಣ ಹಣ ತೆಗೆಯಲಾಗದ ಸಮಸ್ಯೆ ತನಗೆ ಆಗಿರಬಹುದು ಎಂದು ತಿಳಿದು,ಸಹಾಯಕ್ಕೆ ಬಂದ ಅಪರಿಚಿತನ ಮಾತು ನಂಬಿ ಕಿಶೋರ್ ಮನೆಗೆ ಮರಳಿದ್ದ . ಕಿಶೋರ್ ತನ್ನ ಮನೆಯ ದಾರಿಗೆ ಹೊರಡುತ್ತಿದ್ದಂತೆ,ತಾನು ಎಗರಿಸಿದ್ದ ಕಿಶೋರ್ ನ ಅಸಲಿ ಕಾರ್ಡ್ ಬಳಸಿಕೊಂಡು ಆತನ ಖಾತೆಯಿಂದ 40000 ರೂ ಹಣವನ್ನು ಅಂಕೋಲಾದ ಮುಖ್ಯ ಮಾರುಕಟ್ಟೆ ರಸ್ತೆಯಂಚಿಗೆ ಇರುವ ಕೆನರಾ ಬ್ಯಾಂಕ್ ATM ಕೇಂದ್ರದಿಂದಲೇ ವಿತ್ ಡ್ರಾ ಮಾಡಿ, ನಂತರ 4 ಸಾವಿರ ರೂ ಗಳನ್ನು ಹುಬ್ಬಳ್ಳಿಯಲ್ಲಿ ವಿತ್ ಡ್ರಾ ಮಾಡಿಕೊಂಡಿದ್ದ ಎನ್ನಲಾಗಿದ್ದು ಒಟ್ಟೂ 44 ಸಾವಿರ ರೂಪಾಯಿ ಹಣ ಲಪಟಾಯಿಸಿದ್ದ, ಕಿಶೋರ ಈತನಿಗೆ, ಅಪರಿಚಿತ ವ್ಯಕ್ತಿ ತನ್ನನ್ನು ಯಾಮಾರಿಸಿ ಖಾತೆಯಿಂದ ಹಣ ಎಗರಿಸಿರುವದು ಗಮನಕ್ಕೆ ಬಂದು ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರ ಹೊರತಾಗಿ ಶಿರಸಿ, ಯಲ್ಲಾಪುರ,ಕಾಪು ಮಂಗಳೂರು ಮತ್ತಿತರೆಡೆ ಬೇರೆ ಬೇರೆ ವ್ಯಕ್ತಿಗಳಿಗೂ ಅವರ ಕಾರ್ಡ್ ಬದಲಿಸಿ,ತನ್ನ ವಂಚನೆ ಕರಾಮತ್ತು ತೋರಿಸಿದ್ದ ಎನ್ನಲಾಗಿದ್ದು ,ಈತನ ವಿರುದ್ಧ ಕೆಲವೆಡೆ ಪ್ರಕರಣ ದಾಖಲಾಗಿದ್ದಾರೆ,ಇನ್ನು ಕೆಲವೆಡೆ ಈವರೆಗೂ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ ಮಾಡುತ್ತಿರುವ ಈಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು, ವಂಚನೆ ಜಾಲ ಬೇಧಿಸಲು ಇಲಾಖೆಯ ವಿಶೇಷ ತಂಡ ರಚಿಸಿದ್ದರು. ಸಿಸಿ ಕ್ಯಾಮರಾ ಫುಟೇಜ್, ಟೋಲ್ ಗೇಟ್ ಕ್ಯಾಮರಾ ಮತ್ತಿತರ ಪೂರಕ ಆಧಾರದ ಮೇಲೆ ಆರೋಪಿತನ ಜಾಡು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದರು ಎನ್ನಲಾಗಿದೆ.
ತನ್ನ ಇರುವಿಕೆ ಗೊತ್ತಾಗದಂತೆ, ಈ ಖತರ್ನಾಕ ಆಸಾಮಿ 8 ರಿಂದ 10 ಮೊಬೈಲ್ ಸಿಮ್ ಗಳನ್ನು ಬಳಕೆ ಮಾಡಿ, ಬಿಸಾಡಿ ಪೊಲೀಸರಿಗೂ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದ ಎನ್ನಲಾಗಿದೆ. ಪಿಎಸ್ಐ ಪ್ರೇಮನ ಗೌಡ ಪಾಟೀಲ್ ವಿಶೇಷ ಚಾಕಚಕ್ಯತೆಯಿಂದ ಈ ಪ್ರಕರಣ ಬೇಧಿಸಿದ್ದು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಮುಂಬೈನ ಕುರ್ಲಾ ಸಾಕೀನವಾಡದಲ್ಲಿ ವಂಚಕನನ್ನು,ಕಾರು ಸಮೇತ ವಶಕ್ಕೆ ಪಡೆದ ಪೋಲೀಸರು ತನಿಖೆ ಮುಂದುವರೆಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ನಿರ್ದೇಶಕನಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ, ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್.ಐ ಪ್ರವಿಣಕುಮಾರ್, ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಎ.ಎಸ್. ಐ ಬಾಬು ಆಗೇರ, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಭಗವಾನ್ ಗಾಂವಕರ್, ಮನೋಜ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿತನು ಅಂಕೋಲಾ ತಾಲೂಕು, ಉತ್ತರ ಜಿಲ್ಲೆಯ ಇತರೆ ತಾಲೂಕುಗಳು,ಸೇರಿದಂತೆ ರಾಜ್ಯ ಮತ್ತು ಅಂತರ್ ರಾಜ್ಯಗಳಲ್ಲಿ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದ್ದು ,ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.