ಅಂಕೋಲಾ: ವಾಸರಕುದ್ರಿಗೆ ಗ್ರಾಮ ಪಂಚಾಯಿತಿಯ ಪ್ರಥಮ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿ, ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಕೊಡ್ಸಣಿಯ ರಾಖಿ ನಾಗೇಶ ಗೌಡ (44) ಇವರು ಅಕಾಲಿಕ ಮರಣ ಹೊಂದಿದ್ದಾರೆ. ಗ್ರಾಮೀಣ ಭಾಗದ ಮಹಿಳಾ ಜನ ಪ್ರತಿನಿಧಿಯಾಗಿ, ಹಲವಾರು ಅಭಿವೃದ್ಧಿ ಕೆಲಸಗಳಿಗೆ ಮೂಲ ಕಾರಣೀಕರ್ತರಾಗಿದ್ದ ರಾಖಿ ಗೌಡ, ತಮ್ಮ ರಾಜಕೀಯ ಸೇವಾವಧಿ ನಂತರದ ದಿನಗಳಲ್ಲಿ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕೋವೀಡ್ ಮತ್ತಿತರ ತುರ್ತು ಸಂದರ್ಭಗಳಲ್ಲಿ, ತನ್ನ ಜೀವಕ್ಕಿರುವ ಅಪಾಯದ ಅರಿವಿದ್ದೂ, ಮುಂಚೂಣಿ ಕಾರ್ಯಕರ್ತೆಯಾಗಿ ಜನರ ಆರೋಗ್ಯ ಸುರಕ್ಷತೆಗಾಗಿ ಇಲಾಖೆಯ ಇತರೆ ಸಿಬ್ಬಂದಿಗಳ ಜೊತೆ ಉತ್ತಮ ಕಾರ್ಯ ನಿರ್ವಹಿಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅದಾವುದೋ ಕಾರಣದಿಂದ ಇತ್ತೀಚಿಗೆ ಅವರನ್ನು ಕಾಡಿದ ಅನಾರೋಗ್ಯ ಸಮಸ್ಯೆಯಿಂದ ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ , ಅಲ್ಲಿ ಶಸ್ತ್ರಚಿಕಿತ್ಸೆಗೂ ಒಳಪಡಿಸಲಾಗಿತ್ತು..
ಅದಾಗಿ ಕೆಲ ದಿನ ಕಳೆಯುವಷ್ಟರಲ್ಲಿಯೇ ರೋಗ ಗುಣಮುಖವಾಗಬಹುದೆಂಬ ಆಶಾ ಭಾವನೆಯಲ್ಲಿದ್ದ ಕುಟುಂಬ ವರ್ಗದವರಿಗೆ ನಿರಾಶೆ ಕಾಡುವಂತಾಗಿ, ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಬಳಿಕ ಬೇತರಿಕೆ ಕಂಡು ಬರದೇ ,ಹೆಚ್ಚಿನ ಚಿಕಿತ್ಸೆಗಾಗಿ ರಾಕಿ ಗಾಡರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಉಂಟಾಯಿತು ಎನ್ನಲಾಗಿದ್ದು, ಅಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ನೀಡಿದರೂ, ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೇ ರಾಕಿ ಗೌಡ ಕೊನೆಯುಸಿರು ಎಳೆದರು ಎನ್ನಲಾಗಿದೆ.
ತಮ್ಮ ಸರಳ ಸಜ್ಜನಿಕೆ ಮೂಲಕ ಹೆಸರಾಗಿದ್ದ ನಗುಮುಖದ ಈ ಸಹೋದರಿಯ ಅಕಾಲಿಕ ಸಾವಿಗೆ ಮಾಜಿ ಶಾಸಕರಾದ ಸತೀಶ್ ಸೈಲ್, ಯುವ ಮುಖಂಡರಾದ ಪ್ರಶಾಂತ ದೇಶಪಾಂಡೆ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ,ತಹಶಿಲ್ದಾರ ಉದಯ ಕುಂಬಾರ, ತಾಲೂಕಾ ಆರೋಗ್ಯಾಧಿಕಾರಿ ಡಾ ನಿತೀನ ಹೊಸ್ಮೇಲಕರ, ತಾ ಪಂ ಇಒ ಪಿ.ವೈ ಸಾವಂತ ಸೇರಿದಂತೆ ಇತರೆ ಗಣ್ಯರು, ಅಧಿಕಾರಿಗಳು, ಊರ ನಾಗರಿಕರು, ಕಂಬಿನಿ ಮಿಡಿದಿದ್ದಾರೆ.ಮೃತ ರಾಕಿ ಗೌಡ ಇವರು, ಪತಿ ನಾಗೇಶ ಗೌಡ, ಪುತ್ರ ಈಶ್ವರ ಗೌಡ, ಮಗಳು ಐಶ್ವರ್ಯ ಗೌಡ ಸೇರಿದಂತೆ ಕುಟುಂಬ ವರ್ಗ ಹಾಗೂ ಅಪಾರ ಬಂಧು ಬಳಗ ತೊರೆದಿದ್ದಾರೆ.
ಗ್ರಾ.ಪಂ ಅಧ್ಯಕ್ಷರಾದ ಪ್ರದೀಪ ನಾಯಕ ವಾಸರೆ,ರಾಮಚಂದ್ರ ನಾಯ್ಕ ಅಗಸೂರು, ಪಾಂಡು ಗೌಡ ಭಾವಿಕೇರಿ, ಪ್ರಮುಖರಾದ ಪಾಂಡುರಂಗ ಗೌಡ ಹೊನ್ನೆಬೈಲ್, ವಿನೋದ ನಾಯಕ ಬಾಸಗೋಡ, ಶೇಖರ ಗೌಡ ಮೂಡ್ರಾಣಿ, ಜಗದೀಶ ಬೆಳಂಬಾರ, ತಿಮ್ಮಣ್ಣ ನಾಯ್ಕ, ರಾಮನಗುಳಿ ಪ್ರಾ. ಆ ಕೇಂದ್ರದ ವೈದ್ಯಾಧಿಕಾರಿಗಳು , ತಾಲೂಕಿನ ಇತರೆ ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಬೆಳಸೆ ಮತ್ತಿತರ ಗ್ರಾ.ಪಂ ಗಳ ಕೆಲ ಜನಪ್ರತಿನಿಧಿಗಳು, ಸುತ್ತ ಮುತ್ತಲಿನ ಊರ ನಾಗರಿಕರು ಸೇರಿದಂತೆ ನೂರಾರು ಜನರು ರಾಕಿ ಗೌಡ ಅವರ ಅಂತಿಮ ದರ್ಶನ ಪಡೆದುಕೊಂಡರು.
ಸಂತಾಪ: ಗ್ರಾಪಂ ಮಾಜಿ ಅಧ್ಯಕ್ಷೆಯಾಗಿ, ಆಶಾ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದ ರಾಕಿ ಗೌಡ ಅವರ ಅಕಾಲಿಕ ಸಾವಿನಿಂದ ತನ್ನ ಕ್ಷೇತ್ರ ವ್ಯಾಪ್ತಿಯ ದಿಟ್ಟ ಮಹಿಳೆ ಒಬ್ಬಳನ್ನು ಕಳೆದುಕೊಂಡಂತೆ ಆಗಿದೆ. ಭಗವಂತನು ಅವಳ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಅಗಲುವಿಕೆಯ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸಂತಾಪ ಸೂಚಿಸಿದ್ದಾರೆ ಮತ್ತು ನೊಂದ ಕುಟುಂಬಕ್ಕೆ, ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಸಿಗಬಹುದಾದ ಎಲ್ಲಾ ರೀತಿಯ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.