ಅಂಕೋಲಾ:ಉತ್ತರ ಕನ್ನಡ ಜಿಲ್ಲೆಯನ್ನಷ್ಟೇ ಅಲ್ಲದೇ ರಾಜ್ಯ ಹಾಗೂ ದೇಶದಲ್ಲೂ ಸಂಚಲನ ಮೂಡಿಸಿದ್ದ ಉದ್ಯಮಿ ಆರ್. ಎನ್ ನಾಯಕ, ಹತ್ಯೆಯಾಗಿ ಹಲವು ವರ್ಷಗಳೇ ಕಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಮಾ. 30 ರಂದು ತೀರ್ಪು ಪ್ರಕಟಿಸಲಿದೆ ಎನ್ನಲಾಗಿದೆ.
ಸಹಕಾರಿ, ರಾಜಕೀಯ, ಅದಿರು ಉದ್ಯಮ ಹೀಗೆ ಹತ್ತಾರು ರಂಗಗಳಲ್ಲಿ ಗುರುತಿಸಿಕೊಂಡಿದ್ದ ಅಂಕೋಲಾದ ಆರ್. ಎನ್. ನಾಯಕ,2013 ರ ಡಿಸೆಂಬರ್ 21 ರಂದು ಮಧ್ಯಾಹ್ನ ತಮ್ಮ ದ್ವಾರಕಾ ಸೌಹಾರ್ದ ಸಹಕಾರಿ ಬ್ಯಾಂಕ್ ಪ್ರಧಾನ ಕಛೇರಿಯ ಹತ್ತಿರ (ಕೆ.ಸಿ. ರಸ್ತೆ ) ಭೂಗತ ಪಾತಕಿ ಬನ್ನಂಜೆ ರಾಜಾ ನ ಸಹಚರರ ಗುಂಡೇಟಿಗೆ ಬಲಿಯಾಗಿದ್ದರು. ಆರ್. ಎನ್. ನಾಯಕ ಅವರನ್ನು ಸುಪಾರಿ ಹಂತಕರ ಮೂಲಕ ಗುಂಡಿಕ್ಕಿ ಹತ್ಯೆ ಮಾಡಿಸಿದ್ದ ಪ್ರಮುಖ ಆರೋಪಿ ಎನಿಸಿದ್ದ ಬನ್ನಂಜೆ (ರಾಜೇಂದ್ರ ಕುಮಾರ )ಮೊರೊಕ್ಕೊದಲ್ಲಿ ತಲೆ ಮರೆಸಿಕೊಂಡಿದ್ದ.
ಆತನನ್ನು 2015ರ ಆ 14 ರಂದು ಬೆಳಗಾವಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರ್. ಎನ್. ನಾಯಕ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಹಾಗೂ ಸವಾಲಾಗಿ ಸ್ವೀಕರಿಸಿದ್ದ ಪೊಲೀಸ್ ಇಲಾಖೆ, ಕೋಕಾ ಕಾಯ್ದೆಯಡಿ ವಿಚಾರಣೆ ನಡೆಸಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಆರೋಪಿಗಳನ್ನು ಗುರುತಿಸಿ ಅವರಲ್ಲಿ 13 ಆರೋಪಿಗಳನ್ನು ಬಂಧಿಸಿ ಬೆಳಗಾವಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ,ಪ್ರಕರಣದ 9 ನೇ ಆರೋಪಿಯಾಗಿ ಬನ್ನಂಜೆ ರಾಜಾನ ಮೇಲೆ ಸುಮಾರು 500 ಪುಟಗಳ ಚಾರ್ಜ್ ಶೀಟ್ ನ್ನು ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಹಿಂದೆ ಬಹು ಕೋಟಿ ಹಣ ಹಪ್ತಾ ನೀಡುವಂತೆ ಬನ್ನಂಜೆ ಪರ ಬೇಡಿಕೆಗೆ, ಆರ್ ಎನ್ ಎನ್ ನಿರಾಕರಿಸಿದ್ದರು ಎನ್ನಲಾಗಿದ್ದು ಅದನ್ನೇ ಕಾರಣವಾಗಿರಿಸಿಕೊಂಡು ಬನ್ನಂಜೆ ರಾಜಾ, ಉದ್ಯಮಿ ನಾಯಕ ಅವರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಎಂದು ಆರೋಪಿಸಲಾಗಿದ್ದು.ಬನ್ನಂಜೆ ಪ್ಲಾನ್ ಗೆ ಕೆಲ ಸ್ಥಳೀಯ ವ್ಯಕ್ತಿಗಳು ಕೈಜೋಡಿಸಿದ್ದರು ಎನ್ನಲಾಗಿತ್ತು.ಸುಮಾರು 9 ವರ್ಷಗಳ ನಂತರ ಇದೀಗ ನ್ಯಾಯಾಲಯದ ತೀರ್ಪು ಪ್ರಕಟವಾಗಲಿದ್ದು,ತೀರ್ಪಿನ ಕುರಿತಂತೆ ಆರ್ ಎನ್ ಎನ್ ಅಭಿಮಾನಿಗಳು, ಅಂಕೋಲಾ ತಾಲೂಕಿನ ಜನತೆಗಷ್ಟೇ ಅಲ್ಲದೇ ಜಿಲ್ಲೆ, ರಾಜ್ಯ, ದೇಶ, ಹಾಗೂ ವಿದೇಶದ ಕೆಲವು ಕಡೆ ಸಹ ಹಲವರ ಕುತೂಹಲಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಯಾವೆಲ್ಲ ಶಿಕ್ಷೆ ಆಗಲಿದೆ ಎನ್ನುವುದು ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ ಸ್ಪಷ್ಟವಾಗಿ ತಿಳಿದುಬರಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.