ಅಂಕೋಲಾ: ತಾಲೂಕಿನ ಮಾಬಗಿಯ ಮನೆಯೊಂದರಿಂದ ನಾಲ್ಕು ಹೊಸ ಬ್ಯಾಟರಿಗಳು ಮತ್ತು ಇನ್ವರ್ಟರ್ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕಳ್ಳತನ ನಡೆದು 24 ಘಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿ,ಕಳುವು ಮಾಡಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂಕೋಲಾ ತಾಲೂಕಿನ ಕೇಣಿ- ಗಾಬೀತಕೇಣಿ ನಿವಾಸಿ ಶ್ರೀನಿವಾಸ ಸುರೇಶ (34), ಹನುಮಟ್ಟಾ ಮಹಾಮಾಯಾ ದೇವಾಲಯ ಸಮೀಪದ ನಿವಾಸಿ ರಾಘವೇಂದ್ರ ಅಪ್ಪಾಸಾಹೆಬ್(33), ಮತ್ತು ಅಸ್ಸಾಂ ಶಿವಸಾಗರ ನಿವಾಸಿ ಪಂಕಜ ರಾಮು ಗೋಲಾ (25), ಬಂಧಿತ ಆರೋಪಿಗಳಾಗಿದ್ದು, ಕಳುವು ಮಾಡಿದ ಯುನಿವರ್ಸಲ್ ಕಂಪನಿಯ 4 ಬ್ಯಾಟರಿಗಳು, ಮೈಕ್ರೊಟೆಕ್ ಕಂಪನಿಯ ಇನ್ವರ್ಟರ್ ಸೇರಿ ಸುಮಾರು 1.25 ಲಕ್ಷ ಮೌಲ್ಯದ ವಸ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ್ದ ಐ 20 ಕಾರನ್ನು ಪೋಲಿಸರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕಳ್ಳತನದಲ್ಲಿ ಭಾಗಿಯಾಗಿರುವ ಝಾರ್ಖಂಡ ಮೂಲದ ಆರೋಪಿಯೊಬ್ಬ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಆರೋಪಿತರು ಮಾಬಗಿಯ ಶಿವರಾಮ ಗಣಪತಿ ನಾಯಕ ಎನ್ನುವವರ ಮನೆಯ ಬಾಗಿಲ ಚಿಲಕ ಮೀಟಿ ಮುರಿದು ಬ್ಯಾಟರಿಗಳನ್ನು ಕಳ್ಳತನ ಮಾಡಿದ ಕುರಿತು ಏಪ್ರಿಲ್ 1 ರಂದು ದೂರು ದಾಖಲಿಸಲಾಗಿತ್ತು.
ಹೊಸ ಬ್ಯಾಟರಿಗಳು ಹಾಗೂ ಇನ್ವರ್ಟರ್ ಕಳ್ಳತನ ಮಾಡಲು ಹೋಗಿ , ಸಿಕ್ಕಿಬಿದ್ದಿರುವ ಆರೋಪಿತರು, ಜೈಲಿನ ಕತ್ತಲ ಕೋಣೆಯಲ್ಲೇ ಸಿಲುಕಿ ಕೊಳ್ಳುವಂತಾಯಿತು ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಉಪ ನಿರೀಕ್ಷಕರುಗಳಾದ ಪ್ರವಿಣಕುಮಾರ್, ಪ್ರೇಮನಗೌಡ ಪಾಟೀಲ್ ಮತ್ತು ಸಿಬ್ಬಂದಿಗಳಾದ ಪರಮೇಶ ಎಸ್, ಶ್ರೀಕಾಂತ ಕೆ, ಶೇಖರ ಸಿದ್ಧಿ, ಪುನೀತ ನಾಯ್ಕ, ಜಗದೀಶ ನಾಯ್ಕ, ರೋಹಿದಾಸ ದೇವಾಡಿಗ ಮತ್ತಿತರರ ತಂಡ ಯಶಸ್ವೀ ಕಾರ್ಯಾಚರಣೆ ನಡೆಸಿತ್ತು.
ಅಂಕೋಲಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಹಾಗೂ ನಾಗರಿಕ ವಲಯದಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.