ಅಂಕೋಲಾ:ತಾಲೂಕಿನ ಹುಲಿದೇವರವಾಡದ ಎ.ಪಿ.ಎಂ.ಸಿ ಮೈದಾನದ ಬಳಿ ಅಕ್ರಮವಾಗಿ ಮಾದಕ ಪದಾರ್ಥ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ನಿಂತಿದ್ದ ಮೂವರನ್ನು, ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಂಕೋಲಾ ಪೋಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಪ್ರಮುಖ ಆರೋಪಿ ಎನ್ನಲಾದ ಕಾಕರಮಠ ನಿವಾಸಿ ಅಪ್ತಾಬ್ ಅಲ್ತಾಪ್ ಶೇಖ್ (30) , ಆತನ ಜೊತೆಯಲ್ಲಿದ್ದ ಇನ್ನೀರ್ವರು ಆರೋಪಿಗಳಾದ ಅಜ್ಜಿಕಟ್ಟಾ ನಿವಾಸಿ ಅಲ್ತಾಪ್ ಇಕ್ಬಾಲ್ ಶೇಖ್ (32) , ಹಾಗೂ ತೆಂಕಣಕೇರಿ ನಿವಾಸಿ ಆದೇಶ ಮಹಾಬಲೇಶ್ವರ ನಾಯ್ಕ (28) ಬಂಧಿತರಾಗಿದ್ದು, ಅವರಿಂದ 377 ಗ್ರಾಂ ತೂಕದ ಸುಮಾರು 6600 ರೂಪಾಯಿ ಮೌಲ್ಯದ ಮಾದಕ ಗಾಂಜಾ ಪದಾರ್ಥ ವಶಪಡಿಸಿಕೊಳ್ಳಲಾಗಿದೆ.. ಕಳೆದ 1-2 ವರ್ಷಗಳಲ್ಲಿ ತಾಲೂಕಿನ ಕೆಲವೆಡೆ 3 – 4 ಗಾಂಜಾ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಆದರೂ ತಾಲೂಕಿನ ಕೆಲವೆಡೆ ಗಾಂಜಾ ಘಮಲು ಜೋರಾಗಿಯೇ ಇತ್ತು ಎನ್ನಲಾಗಿದ್ದು, ಕೆಲ ಡ್ರಗ್ ಮಾಫಿಯಾದವರು ಖಾಕಿ ಪಡೆಗೆ ಸಿಗದೆ ಅಲ್ಲಲ್ಲಿ ತಮ್ಮ ಕಳ್ಳ ದಂಧೆ ಮುಂದುವರಿಸಿದ್ದರು ಎನ್ನಲಾಗಿದ್ದು,ಪೊಲೀಸ್ ಇಲಾಖೆ ಅಂತಹ ಕೆಲವರ ಮೇಲೆ ಹದ್ದಿನ ಕಣ್ಣಿಟ್ಟಂತಿತ್ತು .ಗೋವಾದಿಂದ – ಕೇರಳದವರಿಗೆ ಕರಾವಳಿ ತೀರದಲ್ಲಿ ಈ ಹಿಂದಿನಿಂದಲೂ ಗಾಂಜಾ ಮತ್ತಿತರ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ.
ಈ ನಡುವೆ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ, ಈ ಹಿಂದಿನ ಎಸ್ಪಿ ಶಿವಪ್ರಕಾಶ ದೇವರಾಜು ಮತ್ತು ಜಿಲ್ಲೆಗೆ ಆಗಮಿಸಿದ ದಿನದಿಂದ ತನ್ನ ದಿಟ್ಟತನ ಪ್ರದರ್ಶಿಸುತ್ತಿರುವ (ಮಹಿಳಾ ಅಧಿಕಾರಿ) ಎಸ್ಪಿ ಡಾ. ಸುಮನ ಪನ್ನೇಕರ ಖಡಕ್ ನೀತಿಯಿಂದ,ಇಲಾಖೆಯ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಗೃತ ಗೊಂಡು, ಅನೇಕ ಅಕ್ರಮ ದಂಧೆಗಳಿಗೆ ಖಡಿವಾಣ ಹಾಕುತ್ತಿರುವುದಕ್ಕೆ ನಾಗರಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.ಇಲಾಖೆ ಇನ್ನಷ್ಟು ಚುರುಕುಗೊಂಡು ಇಂತಹ ಅಕ್ರಮ ದಂಧೆಗಳನ್ನು ಮಟ್ಟಹಾಕಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ನೂತನ ಪಿ.ಎಸ್. ಐ ಮಹಾಂತೇಶ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ