ಸರ್ಕಲ್ ಕಂಬಕ್ಕೆ ಅಸ್ತಿಪಂಜರದಂತಾದ ಜಾಹೀರಾತು ಫಲಕ | ಹೆಸರು ಬದಲಾದರೂ ವ್ಯವಸ್ಥೆ ಬದಲಾಗಲಿಲ್ಲ | ಪಕ್ಷದ ಪತಾಕೆ ಸರಕ್ಕೂ ಇಲ್ಲದ ಕತ್ತರಿ?

ಅಂಕೋಲಾ: ಜೈ ಹಿಂದ್ ಸರ್ಕಲ್ ಎಂದು ಕರೆಯಲ್ಪಡುವ ಪಟ್ಟಣದ ಹೃದಯ ಭಾಗದಲ್ಲಿರುವ ಮುಖ್ಯ ವೃತ್ತದಲ್ಲಿರುವ ಕಂಬಂದ ಮೇಲ್ಮಾಭಗದಲ್ಲಿ ಅಳವಡಿಸಿದ ದೊಡ್ಡ ಜಾಹೀರಾತು ಫಲಕ ನಿರ್ವಹಣೆಯ ಕೊರತೆಯಿಂದ ತನ್ನ ವಿಕಾರರೂಪ ತೋರಿಸುತ್ತಿದ್ದು, ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಂಬಂಧಿಸಿದ ಬ್ಯಾಂಕ್ ಹಾಗೂ ಪುರಸಭೆಯ ಅಸಡ್ಡೆತನಕ್ಕೆ ಸಾಕ್ಷಿಯಾದಂತಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ತಹಶೀಲ್ದಾರ ಕಾರ್ಯಾಲಯ, ಪೋಲೀಸ್ ಠಾಣೆ, ಪ್ರವಾಸಿ ಮಂದಿರ, ಜೈ ಹಿಂದ್ ಹೈಸ್ಕೂಲ ಮತ್ತು ಮೈದಾನ, ಬಸ್ ನಿಲ್ದಾಣದ ಅತೀ ಹತ್ತಿರವಿರುವ ಈ ಮಧ್ಯವರ್ತಿ ಸ್ಥಳದಲ್ಲಿ ಈ ಹಿಂದೆ ಸರ್ಕಲ್ ನಿರ್ಮಿಸಿ ಸಂಚಾರ ಸುರಕ್ಷತೆಗೆ ಒತ್ತು ನೀಡಲಾಗಿತ್ತು.

ಸರ್ಕಲ್ ಮಧ್ಯೆ ಎತ್ತರದ ಕಂಬ ಏರಿಸಿ ಹೈಮಾಸ್ಟ ವಿದ್ಯುತ್ ದೀಪ ಅಳವಡಿಸಿ ಸುತ್ತಲಿನ ಪ್ರದೇಶಕ್ಕೆ ಬೆಳಕು ನೀಡುವ ಯೋಜನೆ ಇದಾಗಿತ್ತು. ನಿರ್ವಹಣೆ ದೃಷ್ಟಿಯಿಂದ ಅಂದಿನ ಪಟ್ಟಣ ಪಂಚಾಯತ ಮತ್ತು ವಿಜಯಾ ಬ್ಯಾಂಕ್ ನಡುವೆ ಒಡಂಬಡಿಕೆ ಮಾಡಿಕೊಂಡು, ಸರ್ಕಲ್ ಮದ್ಯದ ಕಂಬಕ್ಕೆ ಜಾಹೀರಾತು ಫಲಕ ಅಳವಡಿಸಲಾಗಿತ್ತು ಎನ್ನಲಾಗಿದೆ.

ಪ್ರತಿನಿತ್ಯ ಪಟ್ಟಣಕ್ಕೆ ಬಂದು ಹೋಗುವ ಸಾವಿರಾರು ಜನರು ಈ ಫಲಕದ ಮೇಲೆ ಅಳವಡಿಸಿದ ಜಾಹೀರಾತು ವೀಕ್ಷಿಸಲಿ ಎಂಬ ಅಭಿಲಾಷೆ ಇದ್ದಂತಿತ್ತು. ,ಕಳೆದ 2-3 ವರ್ಷಗಳಿಂದ ಸಂಬಂಧಿಸಿದವರ ನಿರ್ಲಕ್ಷ ಇಲ್ಲವೇ ಇತರೆ ಕಾರಣಗಳಿಂದ ಜಾಹೀರಾತು ಫಲಕ ಸರಿಯಾಗಿ ನಿರ್ವಹಣೆ ಮಾಡದ ಕುರಿತು ಸಾಮಾಜಿಕ ಕಾರ್ಯಕರ್ತರಾದ ವಿಜಯ್ಕುಮಾರ್ ವಾಯ್ ನಾಯ್ಕ, ಉಮೇಶ ನಾಯ್ಕ ಮತ್ತಿತರರು ಇಲ್ಲಿಯ ಅವ್ಯವಸ್ಥೆ ಕುರಿತು ಧ್ವನಿಯೆತ್ತಿ ಎಚ್ಚರಿಸುತ್ತಲೇ ಬಂದಿದ್ದಾರೆ.

ಕಂಬಕ್ಕೆಅಳವಡಿಸಿದ ಜಾಹೀರಾತು ಫಲಕಕ್ಕೆ ಆಗೊಮ್ಮೆ ಈಗೊಮ್ಮೆ ಫ್ಲೆಕ್ಸ್ ಅಳವಡಿಸಿದ್ದು, ಬಳಿಕ ಒಂದೆರಡು ತಿಂಗಳಿನಲ್ಲಿಯೇ ಅದು ಹರಿದು ಚಿಂದಿ ಚಿತ್ರಾನ್ನ ವಾಗಿದ್ದು : ಈಗ ಮೈಮೇಲೆ ಬಟ್ಟೆ ಇಲ್ಲದೆ ತುಕ್ಕು ಹಿಡಿದ ಕಬ್ಬಿಣ ಪಟ್ಟಿಗಳು ಅಸ್ಥಿಪಂಜರದಂತೆ ಕಂಡು ಬೆತ್ತಲೆ ದೇಹವನ್ನು ಪ್ರದರ್ಶಿಸುವಂತೆ ಇದೆ.ಸರ್ಕಲ್ ಅಕ್ಕಪಕ್ಕದಲ್ಲಿ ದ್ವಿಪಥ ರಸ್ತೆಯೂ ಹಾದುಹೋಗಿದ್ದು ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಡಿವೈಡರ್ ಹಾಗೂ ಸರ್ಕಲ್ ಬಳಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ವಿವಿಧ ಸೌಲಭ್ಯಗಳ ಕುರಿತು ಜಾಹೀರಾತು ನೀಡಿ,ತನ್ನತ್ತ ಗ್ರಾಹಕರನ್ನು ಸೆಳೆದುಕೊಳ್ಳಬೇಕಿದ್ದ ಬ್ಯಾಂಕ್ , ಇಲ್ಲವೇ ಸಾರ್ವಜನಿಕ ಕಳಕಳಿ, ಶುಚಿತ್ವ,ಆರೋಗ್ಯ ಪರಿಸರ ಸಂಬಂಧಿ ಜಾಹೀರಾತು ಪ್ರದರ್ಶಿಸಿ ಜವಾಬ್ದಾರಿ ಮೆರೆಯಬೇಕಿದ್ದ ಪುರಸಭೆ ಹಾಗೆ ಮಾಡದೇ ಅಸಡ್ಡೆ ತೋರಿತೇ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ಪಟ್ಟಣ ಪಂಚಾಯತ ದಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಆಡಳಿತ ವ್ಯವಸ್ಥೆ ಒಂದೆಡೆಯಾದರೆ, ಈ ಹಿಂದೆ ವಿಜಯ ಬ್ಯಾಂಕ್ ಎಂದು ಕರೆಯಿಸಿಕೊಂಡು ಇತ್ತೀಚಿನ ಬ್ಯಾಂಕ್ ವಿಲೀನ ಪ್ರಕ್ರಿಯೆ ಯಲ್ಲಿ ಬ್ಯಾಂಕ್ ಆಫ್ ಬರೋಡ ಎಂದು ಮರುನಾಮಕರಣಗೊಂಡಿತೇ ವಿನಹ, ಅಂಕೋಲಾದ ಸರ್ಕಲ್ ನಿರ್ವಹಣೆಯತ್ತ ಅದೇಕೆ ನಿರ್ಲಕ್ಷ ತಾಳಿದರೋ ಎನ್ನುವುದಕ್ಕೆ ಸಂಬಂಧಿಸಿದವರೇ ಉತ್ತರಿಸಬೇಕಿದೆ.

ಮುಂಬರುವ ಮಳೆಗಾಲದ ಒಳಗೆ ಈ ಜಾಹೀರಾತು ಫಲಕ ಸರಿಪಡಿಸದಿದ್ದಲ್ಲಿ,ತುಕ್ಕುಹಿಡಿದ ಪಟ್ಟಿಗಳು, ಇತರೆ ಭಾಗಗಳು ಮಳೆ – ಗಾಳಿಗೆ ಸಿಲುಕಿ ಕಿತ್ತು ಬೀಳುವ ಸಾಧ್ಯತೆ ಇದ್ದು ಹಾಗೊಮ್ಮೆ ಬೀಳುವಾಗ ಅಪಾಯ ಸಂಭವಿಸಿದರೆ ಹೊಣೆ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತುಕೊಂಡು ಸಂಪೂರ್ಣ ಜಾಹೀರಾತು ಫಲಕವನ್ನು ತೆರವುಗೊಳಿಸಲಿ. ಅಥವಾ ಹೊಸ ಜಾಹೀರಾತು ಫಲಕ ಅಳವಡಿಸಿ ಸುರಕ್ಷತೆಗೆ ಒತ್ತು ನೀಡಲಿ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಇದರ ಹೊರತಾಗಿ ಪಟ್ಟಣ ಹಾಗೂ ಇತರೆಡೆ ನಡೆಯುವ ಖಾಸಗಿ ಹಾಗೂ ಇತರೆ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನೂರಾರು ಬಗೆಯ ಬ್ಯಾನರ್ ಪೇಂಟಿಂಗ್ ಗಳನ್ನು ಪಟ್ಟಣದ ಹಲವೆಡೆ ಪ್ರದರ್ಶಿಸಲಾಗುತ್ತಿದೆ.ಅಂಥವುಗಳಲ್ಲಿ ಕೆಲವರು ನಿರ್ದಿಷ್ಟ ಶುಲ್ಕ ಪಾವತಿಸಿ ಪುರಸಭೆಯ ಅನುಮತಿ ಪಡೆದು ಜಾಹೀರಾತು ಫಲಕ ಅಳವಡಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಕೆಲವು ಕಾರ್ಯಕ್ರಮಗಳ ಜಾಹೀರಾತು ಫಲಕವನ್ನು ಎಲ್ಲಿ ಬೇಕೆಂದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಬೇಕಾಬಿಟ್ಟಿ ನಿಲ್ಲಿಸುವುದನ್ನು ಮಾಡುತ್ತಾರೆ ಎನ್ನಲಾಗಿದ್ದು ,ಕೆಲವೊಮ್ಮೆ ಪುರಸಭೆ ಸಿಬ್ಬಂದಿಗಳು ಅಂತಹವುಗಳನ್ನು ಗಮನಿಸಿ ತೆರವುಗೊಳಿಸುತ್ತಾರೆ. ಆದರೆ ಜೈಹಿಂದ್ ಸರ್ಕಲ್ ಗೆ ಕಳೆದ ಒಂದು ತಿಂಗಳಿನಿಂದ ಪ್ರಮುಖ ಪಕ್ಷವೊಂದರ ಪತಾಕೆಯ ಸರಮಾಲೆ ಜೋತುಬಿದ್ದು,ಗಾಳಿ ಬಂದಾಗ ಹೊಡೆದುಕೊಳ್ಳುತ್ತಿದೆ.

ಇವುಗಳನ್ನು ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗದಿರುವುದು ಅಧಿಕಾರಿಳಿಗೆ ಆಡಳಿತ ಪಕ್ಷದ ವಿರೋಧ ಕಟ್ಟಿಕೊಳ್ಳುವ ಭಯವೇ ? ಅಥವಾ ಆ ಪಕ್ಷದತ್ತ ಒಲವೇ ಎಂದು ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದಾರೆ?. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಗಳ ಗಮನಕ್ಕೆ ತಂದಾಗ ವಾಹಿನಿ ವರದಿಗಾರರ ಜೊತೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ, ಜಾಹೀರಾತು ಫಲಕ ನಿರ್ವಹಣೆಗೆ ಸಂಬಂಧಿಸಿದಂತೆ ಬ್ಯಾಂಕ್ ವ್ಯವಸ್ಥಾಪಕರ ಜೊತೆ ಚರ್ಚಿಸಲಾಗಿದೆ.ಮುಂದಿನ ತಿಂಗಳ ಅಂತ್ಯದೊಳಗೆ ವ್ಯವಸ್ಥೆ ಸರಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಪೌರಕಾರ್ಮಿಕ ಸಿಬ್ಬಂದಿಗಳ ಕೊರತೆಯಿಂದ ಪಟ್ಟಣ ವ್ಯಾಪ್ತಿಯಲ್ಲಿರಬಹುದಾದ ಅಧಿಕೃತ ಮತ್ತು ಪರವಾನಿಗೆ ಹೊಂದಿದ ಜಾಹೀರಾತು ಫಲಕಗಳನ್ನು ಗುರುತಿಸುವ ಕಾರ್ಯ ವಿಳಂಬವಾಗಿದೆ.

ಮುಂದಿನ ಒಂದೆರಡು ದಿನಗಳಲ್ಲಿ ಅನಧಿಕೃತ ಬ್ಯಾನರ್ ಬಂಟಿಂಗ್ ಗಳು ಕಂಡುಬಂದಲ್ಲಿ ಅದನ್ನು ತೆರವು ಗೊಳಿಸಲಾಗುವುದು ಎಂದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version