ಕಾಯಿಲೆಗಳು ಬಂದಾಗ ಎಷ್ಟೇ ಧೈರ್ಯವಿರುವ ವ್ಯಕ್ತಿಗಳೂ ಕುಗ್ಗುತ್ತಾರೆ.ಆತಂಕ, ಭಯ ಮನೆ ಮಾಡುತ್ತದೆ. ನಂತರ ಧೈರ್ಯ ಹೇಳುವವರು ಸಮಾಧಾನ ಮಾಡುವವರು,ಉಚಿತ ಸಲಹೆ ಕೊಡುವವರು ಸಾಕಷ್ಟು ಜನರಿರುತ್ತಾರೆ.ಆದರೆ ಅದಕ್ಕೆ ಸ್ಪಂದಿಸುವವರು ಕೆಲವೇ ಕೆಲವರು ಮಾತ್ರ ಇರುತ್ತಾರೆ. ತನು-ಮನ-ಧನಗಳ ಸೇವೆ ಮಾಡಿದ ರೆ ಎಂತಹ ಕಾಯಿಲೆಯಾದರೂ ಕಡಿಮೆಯಾಗುತ್ತದೆ ಎನ್ನುವುದಕ್ಕೆ ರಾಮಗೌಡರ ಕುಟುಂಬವೇ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.
ಸಾಮಾನ್ಯವಾಗಿ ಕ್ಯಾನ್ಸರ್ ಕಾಯಿಲೆ ತಂಬಾಕು, ಬೀಡಿ,ಮದ್ಯ ಸೇವನೆಯಿಂದ ಬರುತ್ತದೆ. ಬಾಯಿ,ಗಂಟಲು, ಶ್ವಾಸಕೋಶ ಹಾಗೂ ಹೊಟ್ಟೆಯಭಾಗ ಇತ್ಯಾದಿ. ಮಹಿಳೆಯರಲ್ಲಿ ಎದೆಯಭಾಗದಲ್ಲಿ ಬರುವುದಿದೆ. ದುಶ್ಚಟಗಳಿಂದ ಮಾತ್ರವೇ ಬರುತ್ತದೆ ಎಂದಲ್ಲ. ಆಹಾರ, ನೀರು ಹಾಗೂ ವಂಶ ಪಾರಂಪರ್ಯವಾಗಿಯೂ ಬರುತ್ತದೆ.
ನಾನು ಪ್ರಸ್ತುತ ಪಡಿಸುತ್ತಿರುವ ವ್ಯಕ್ತಿ ನನ್ನ ದೃಷ್ಟಿಯಲ್ಲಿ ಒಬ್ಬ ಸಾಧಕನೇ ಸರಿ.ಎಲೆ ಮರೆಯ ಕಾಯಿಯಂತೆ ಯಾರ ಗಮನಕ್ಕೂ ಬಾರದ ಅಂಕೋಲಾ ತಾಲೂಕಿನ ಹಡವ ಗ್ರಾಮದ ಮೇಲಿನ ಕೇರಿಯ ದಿವಂಗತ ಗೋವಿಂದ ಹಾಗೂ ನಾಗಿ ದಂಪತಿಗಳಿಗೆ ಜನಿಸಿದ ತೃತೀಯ ಪುತ್ರ, ಶ್ರೀ ರಾಮ ಗೋವಿಂದ ಗೌಡ. ದಿನಾಂಕ ೧-೬-೧೯೪೭.ತನ್ನ ಕರಕುಶಲ ಕಲೆಯಿಂದಲೇ ಸ್ಥಳೀಯ ಜನರಿಂದ ಗುರುತಿಸಿಕೊಂಡವನು.ಈ ಹೆಸರು ಅನ್ವರ್ಥಕವೇ ಸರಿ.ಏಕೆಂದರೆ ‘ಪುರಾಣದ ರಾಮ ರಾವಣನಿಂದ ಗೆದ್ದರೆ ಈ ರಾಮ ಕ್ಯಾನ್ಸರ್ ನಿಂದ ಗೆದ್ದ’ನು.
ರಾಮನದು ತುಂಬಾ ಬಡಕುಟುಂಬ.ಇಬ್ಬರು ಗಂಡು ಮಕ್ಕಳು. ಯಾದು,ಸುಕ್ರು ಮತ್ತು ಒಬ್ಬಳು ಹೆಣ್ಣು ನೀಲಾವತಿ.ಯಾದು ಗೌಡರಿಗೆ ಒಂದು ಗಂಡು, ಒಂದು ಹೆಣ್ಣು.ಸುಕ್ರು ಗೌಡರಿಗೆ ಇಬ್ಬರೂ ಗಂಡು. ನೀಲಾವತಿಗೆ ಇಬ್ಬರೂ ಹೆಣ್ಣು ಮಕ್ಕಳು. ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡವಳು.ನಾನು ಅವರ ಮನೆಗೆ ಹೋದಾಗ ರಾಮಗೌಡರ ಮಕ್ಕಳ ಜೊತೆ ಮತಾಡಿ ಹೊರಡಬೇಕಾದರೆ ರಾಮಗೌಡರನ್ನು ವಿಚಾರಿಸಿದರೆ ದನದಕೊಟ್ಟಿಗೆಯ ಹತ್ತಿರವೋ,ಅಥವಾ ದನಕ್ಕೆ ಬೇಕಾದ ಮೇವನ್ನು ತರುವುದಕ್ಕಾಗಿ ಹೋಗಿರುತ್ತಿದ್ದರು.ಹಾಗಾಗಿ ನಾನು ಹೋದಾಗ ಅವರು ಸಿಗುವುದು ಅಪರೂಪವೇ,ಅಪರೂಪಕ್ಕೆ ವರಾಂಡದ ಮೇಲೆ ಕುಳಿತರೆ ನಮಸ್ಕರಿಸಿ ಬರುತ್ತಿದ್ದೇನು.ರಾಮಗೌಡರ ಹೆಂಡತಿ ಗೋಪಿಯೂ ಮನೆಗೆಲಸದಲ್ಲಿ ತೊಡಗಿರುತ್ತಿದ್ದಳು.
ಹೀಗೆ ಆರೋಗ್ಯ ದಿಂದಲೇ ಇದ್ದವರು. ೨೦೧೮ರ ಫೆಬ್ರುವರಿ ತಿಂಗಳಲ್ಲಿ ರಾಮಗೌಡರಿಗೆ ತಂಡಿ,ಕಫ್,ಪ್ರಾರಂಭವಾಗಿ ಕೆಮ್ಮಲಿಕ್ಕೆ ಶುರು ಮಾಡಿದರು.ಅವರ ಮಕ್ಕಳು ತಂಡಿ,ಕಫ್,ಕೆಮ್ಮುವುದಕ್ಕೆ ಔಷಧ ನೀಡಿದರು. ಕಡಿಮೆಯೂ ಆಯಿತು. ಆದರೆ ರಾಮಗೌಡರ ಧ್ವನಿ ಕ್ಷೀಣಿಸುತ್ತಾ ಬಂತು.ಅವರ ಸೊಸೆ ಮಂಗಲಾ, ಮೂರು- ನಾಲ್ಕು ದಿವಸಗಳಾದರೂ ಧ್ವನಿ ಸರಿಯಾಗಿ ಬರುತ್ತಿಲ್ಲವೆಂದು ವಿಚಾರಿಸಿದರೆ, ಸ್ವಲ್ಪ ಕಫ್ ಇದೆ ಎಂದು ಸುಮ್ಮನಾಗುತಿದ್ದರು.ಒಂದು ದಿನ ಅವರ ಸೊಸೆ ಮಂಗಲಾರವರೇ ಹಡವದಿಂದ ಹೊನ್ನಾವರದ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅಲ್ಲಿ ಗಂಟಲು ಚಿಕಿತ್ಸೆ ಮಾಡಿ ಎಕ್ಸ್ ರೇ ಮಾಡಿಸಿದರು.ಎಕ್ಸ್ ರೇ ನೋಡಿದ ಡಾಕ್ಟರ್ ಗಂಟಲಿನ ಒಳಗೆ ಗಡ್ಡೆಯಾಗಿದೆ.ಇದು ಗಂಟಲು ಕ್ಯಾನ್ಸರ್. ನೀವು ಬೇಗನೆ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು. ಮಗ ಸುಕ್ರುಗೌಡರು ತಡಮಾಡದೆ ಮಂಗಳೂರಿನ ಸುಪರ್ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಮತ್ತೆ ಸ್ಕ್ಯಾನಿಂಗ್ ಮಾಡಿಸಿದಾಗ ಅಲ್ಲಿಯೂ ಗಂಟಲಿನಲ್ಲಿ ಗಡ್ಡೆಯಾಗಿದೆ, ಬೇಗನೆ ಆಪರೇಶನ್ ಮಾಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಿದೆ. ಇದಕ್ಕೆ ಲಕ್ಷ ಗಟ್ಟಲೆ ಖರ್ಚಾಗುತ್ತದೆ ಎಂದು ಹೇಳಿದರು.
ಮಂಗಳೂರಿಗೆ ತಂದೆಯನ್ನು ಕರೆದುಕೊಂಡು ಹೋದ ಮಗ ಸುಕ್ರು ಗೌಡರಿಗೆ ಒಂದು ಸಲ ದಿಕ್ಕು ತೋಚದಂತಾಯಿತು. ಇಳಿವಯಸ್ಸಿನ ತಂದೆ ಮತ್ತು ಲಕ್ಷಗಟ್ಟಲೆ ಹಣ ಹೊಂದಿಸುವುದು.ಆದರೂ ಲೆಕ್ಕಿಸದೇ ಬಡತನಲ್ಲೂ ಚಿಕಿತ್ಸೆಗೆ ಒಳಪಡಿಸಿ, ಗುಣಪಡಿಸಲು ಮುಂದಾದರು.ಒಂದು ತಿಂಗಳು ರೇಡಿಯೇಶನ್ ಥೆರಪಿ ಹಾಗೂ ಅದಕ್ಕೂ ಹೆಚ್ಚಿನ ದಿವಸ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳಿದಾಗ,ಒಪ್ಪಿಕೊಂಡರು.ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಒಂಕಾಲೊಜಿಯಲ್ಲಿ ಚಿಕಿತ್ಸೆ ಪ್ರಾರಂಭವಾಯಿತು.
ರಾಮಗೌಡರ ಕುಟುಂಬದ ಬಿಪಿಎಲ್ ಕಾರ್ಡ ದಾರರಿಗೆ ದಿವಂಗತ ಪ್ರಧಾನ ಮಂತ್ರಿ ವಾಜಪೇಯಿಯವರು ಮಾಡಿದ ಯೋಜನೆಯ ಅಡಿಯಲ್ಲಿ ಕ್ಯಾನ್ಸರ್ ಕಾಯಿಲೆಯಾದವರಿಗೆ ಉಚಿತ ವಸತಿ ಮತ್ತು ಊಟ ನೀಡುವರು.ಆ ಸ್ಕೀಮ್ ಸ್ವಲ್ಪ ಮಟ್ಟಿಗೆ ವರದಾನವಾಯಿತು.ಈಗಲೂ ಸುಕ್ರು ಗೌಡರು ಆ ಮಹಾನುಭಾವ ವಾಜಪೇಯಿಯವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು ಎನ್ನುತ್ತಾರೆ.
ಅವರನ್ನು ಮಾತನಾಡಿಸಿದಾಗ ಅವರ ಮಾತಿನ ಶಬ್ದಗಳು ನನಗೆ ಗೊತ್ತಾಗುತ್ತಿರಲಿಲ್ಲ.ಅವರ ಮೊಮ್ಮಗ ನ ಬಳಿ ಮಾತನಾಡಿ,ಕಡಿಮೆಯಾಗುತ್ತದೆ ಧೈರ್ಯವಾಗಿರಿ ಎಂದು ಸಮಾಧಾನ ಹೇಳಿದೆ. ಗಂಟಲೊಳಗೆ ತುಂಬಾ ನೋವಾಗುತ್ತದೆ, ಮಜ್ಜಿಗೆ ಅನ್ನ ಬಿಟ್ಟರೆ ಬೇರೆ ಆಹಾರ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದರು.ಆದರೆ ಅವರ ಮಾತಿನಲ್ಲಿ ಸ್ಪಷ್ಟತೆ ಇತ್ತು. ಚೆನ್ನಾಗಿ ಮಾತನಾಡಿದರು.ನಾನು ತೆಗೆದುಕೊಂಡು ಹೋದ ಹಣ್ಣನ್ನು ಸ್ವೀಕರಿಸಿದರು.ನನಗೆ ಈ ಊಟ ಮೆಚ್ಚುವುದಿಲ್ಲ ಎಂದರು.ನನಗೆ ಮೀನು ಊಟ ಎಂದರೆ ತುಂಬಾ ಇಷ್ಟ ಎಂದರು.ಮನಸ್ಸು ಹಗುರವಾಯಿತು.
ಮುಂದೆ ಹದಿನೈದು ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ಬಂದರು.ಖಾರ ಹೊರತುಪಡಿಸಿ ಚೆನ್ನಾಗಿ ಊಟ ಮಾಡಿದರು. ನಂತರ ಸಂಪೂರ್ಣ ಗುಣಮುಖರಾದರು.ನನಗೆ ಶ್ರೀಮತಿ ನೇಮಿಚಂದ್ರವರು ಬರೆದ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ಲೇಖನದಲ್ಲಿ ಮನುಷ್ಯನಿಗೆ ಕಷ್ಟ, ದು:ಖ,ಸೋಲು,ನಿರಾಸೆಗಳು ಬಂದಾಗ ದುರಾದೃಷ್ಟವನ್ನು ನಿಂದಿಸುವುದೇ ಹೆಚ್ಚು ಛಲದಿಂದ ಬದುಕನ್ನು ಎದುರಿಸಿ ಗೆಲ್ಲುವ ಆಯ್ಕೆಗಳನ್ನು ನಮಗೆ ಬದುಕು ಕೊಟ್ಟಿದೆ ಎಂಬ ವಿಷಯ ನೆನಪಾಯಿತು.ರಾಮಗೌಡರ ಕುಟುಂಬದವರ ಸಹಕಾರ ಮಗ ಸುಕ್ರುಗೌಡರ ತಾಳ್ಮೆ,ಸಹನೆ ಹಾಗೂ ಪ್ರಯತ್ನಕ್ಕೆ ಫಲ ದೊರೆಯಿತು.
೨೦೨೦ರ ಲಾಕ್ ಡೌನ್ ಸಮಯ ರಾಮಗೌಡರ ಮನೆಗೆ ಹೋದಾಗ ಅವರು ಮನೆಯ ಹೊರಗಡೆ ಚಿಟ್ಟೆಯ ಮೇಲೆ ಕುಳಿತು ಮೀನು ಹಾಕುವ ಸಂಚಿ (ಮೀನು ಹಿಡಿಯುವವರು ನೀರಿನಲ್ಲಿ ಬಳಸುವ ಚೀಲ) ನೇಯುತ್ತಿದ್ದರು.ನೀವು ಸ್ವತಃ ನಿರ್ಮಾಣ ಮಾಡುತ್ತೀರಿ, ಎಂದು ಕುತೂಹಲದಿಂದ ಕೇಳಿದಾಗ, ಇದರ ಜೊತೆಗೆ ಮೀನು ಹಿಡಿಯುವ ಕುಳಿಯನ್ನು ನಿರ್ಮಿಸುತ್ತೇನೆಂದರು.ಬಹಳಷ್ಟು ಜನರಿಗೆ ನಾನು ಮಾಡಿಕೊಟ್ಟಿದ್ದೇನೆ ಎಂದರು.ಮೀನು ಹಾಕುವ ಸಂಚಿ ಮತ್ತು ಮೀನು ಹಿಡಿಯುವ ಕುಳಿ ತಯಾರಿಸುವುದು ಹೇಗೆ ಎಂದು ಕೇಳಿದಾಗ ತುಂಬಾ ಸಂತೋಷದಿಂದ ಹೇಳಿದರು.
ಮೊದಲು ಸುಲಿದ ತೆಂಗಿನಕಾಯಿಯ ಸಿಪ್ಪೆಯನ್ನು ತೆಗೆದುಕೊಂಡು ಉಪ್ಪು ನೀರು ಇರುವ ಜಾಗದಲ್ಲಿ ಮಣ್ಣಲ್ಲಿ ಹೂತು ಹಾಕಬೇಕು ಒಂದು ತಿಂಗಳ ನಂತರ ನೀರಿನ ಅಡಿಯಿಂದ ತೆಗೆದು ಅದರಿಂದ ಮೊದಲು ನಾರು ತಯಾರಿಸಬೇಕು. ನಾರಿನಿಂದ ಸಂಚಿ ನೇಯಲು ಬೇಕಾದ ನಾರು ಬಂದಿ(ದಾರ)ಯನ್ನು ಮೊದಲು ಸಿದ್ದಪಡಿಸಿಕೊಳ್ಳಬೇಕು. ತದನಂತರ ಸಂಚಿ ನಿರ್ಮಾಣ ಮಾಡುವುದು.
ಉಪ್ಪು ನೀರಿನಲ್ಲಿ ನೆನೆ ಹಾಕುವುದರಿಂದ ತುಂಬಾ ಗಟ್ಟಿಯಾಗಿ,ಚೆನ್ನಾಗಿ ತಾಳಿಕೆಯೂ ಬರುವುದು. ಇದಕ್ಕೆಲ್ಲ ತಿಂಗಳು ಗಟ್ಟಲೆ ಸಮಯ ಬೇಕಾಗುತ್ತದೆ ಎಂದು ನಗುನಗುತ್ತಲೇ ಹೇಳಿದರು.ನಾನು ನನ್ನ ಕೆಲಸದ ಬಿಡುವಿನಲ್ಲಿ ಸಿದ್ದಪಡಿಸುತ್ತೇನೆ. ವ್ಯಾಪಾರಕ್ಕಾಗಿ ಮಾಡುವುದಿಲ್ಲ ಎಂದು ಹೇಳಿದಾಗ, ತದೇಕ ಚಿತ್ತದಿಂದ ನಾನು ಅವರ ಮುಖವನ್ನೇ ನೋಡಿದೆನು.
ಸಮಸ್ಯೆಗಳು ಬಂದಾಗ ಒಂದರ ಬೆನ್ನಿಗೆ ಒಂದು ಬರುತ್ತದಂತೆ ಹಾಗೆ ರಾಮಗೌಡರ ಹೆಂಡತಿ ಗೋಪಿಯವರು ಮಂಗಳೂರಿನ ಆಸ್ಪತ್ರೆಯಲ್ಲಿದ್ದು, ಈಗ ಗುಣ ಮುಖರಾಗಿದ್ದಾರೆ.ಸುಕ್ರುಗೌಡರ ಭಗೀರಥ ಪ್ರಯತ್ನದಿಂದ ಹಿರಿಯಜೀವವನ್ನು ಉಳಿಸಿಕೊಂಡಿದ್ದಾರೆ.ಪ್ರಸ್ತುತ ರಾಮ ಮತ್ತು ಅವರ ಧರ್ಮಪತ್ನಿ ಗೋಪಿಯವರು ಭತ್ತದಗದ್ದೆಯ ಕೊಯಿಲು ಕತ್ತರಿಸುವ ಕೆಲಸವನ್ನು ಮಾಡುತ್ತಾ ಸಂತೋಷದಿಂದ ಇದ್ದಾರೆ.ಇಂತಹ ಕುಟುಂಬದ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದೆ ದೀರ್ಘಾಯುಷ್ಯ ಮತ್ತು ಆರೋಗ್ಯವಂತರಾಗಿ ಬಾಳಬೇಕು ಎಂದು ಭಗವಂತನಲ್ಲಿ ಪ್ರಾರ್ಥಮಾಡುತ್ತೇನೆ. ಮತ್ತು ಗಂಟಲು ಕ್ಯಾನ್ಸರ್ ಬಂದವರು ಚಿಕಿತ್ಸೆ ತೆಗೆದುಕೊಂಡರೆ ಗುಣಮುಖರಾಗುತ್ತಾರೆ ಎಂಬುದಕ್ಕೆ ಇದೇ ಉತ್ತಮ ನಿದರ್ಶನವಾಗಿದೆ.
- ಲೇಖನ: ಮಹಾದೇವ ಬೊಮ್ಮು ಗೌಡ, ವಿಜ್ಞಾನ ಶಿಕ್ಷಕರು, ಸೆಕೆಂಡರಿ ಹೈಸ್ಕೂಲ್, ಹಿರೇಗುತ್ತಿ, .ಕುಮಟಾ