ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಕೀರ್ತಿ ಮೈಸೂರು ಸಂಸ್ಥಾನದ ಒಡೆಯರಿಗೆ ಸಲ್ಲುತ್ತದೆ: ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ

ಕುಮಟಾ: ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದ ಕೀರ್ತಿ ಮೈಸೂರು ಸಂಸ್ಥಾನದ ಒಡೆಯರಿಗೆ ಸಲ್ಲುತ್ತದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ ಅವರು, ಕನ್ನಡ ಸಾಹಿತ್ಯ ಪರಿಷತ್ ಹುಟ್ಟಿಕೊಂಡ ಪರಿಯನ್ನು ವಿವರಿಸಿದರು.

ಮೈಸೂರು ಸಂಸ್ಥಾನದ ರಾಜರಲ್ಲಿ ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯ ಅನೇಕ ಪ್ರಗತಿಪರ ಯೋಜನೆಗಳು ಅಭಿವೃದ್ಧಿಗೆ ಮುನ್ನುಡಿ ಬರೆಯುವಂತಾಗಿದೆ. ಕನ್ನಡ ಭಾಷೆಯ ಸಂಮೃದ್ಧಿಯನ್ನು ಹೆಚ್ಚಿಸಲು ಒಡೆಯರ ಕಲ್ಪನೆಯಲ್ಲಿ ಮೂಡಿದ್ದು, ಸಾಹಿತ್ಯ ಪರಿಷತ್ ಸ್ಥಾಪನೆ. ಸರ್ ಎಂ ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಪಂಡಿತರ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್‍ನ್ನು ಹುಟ್ಟಿಹಾಕಿದರು. ಅಲ್ಲಿಂದ ಇಲ್ಲಿಯ ವರೆಗೆ ಪರಿಷತ್ತು ಬೃಹದಾಕಾರವಾಗಿ ಬೆಳೆದಿದೆ. ಈಗ ಸರ್ಕಾರ ಪರಿಷತ್‍ಗೆ ಕೋಟಿಕಟ್ಟಲೆ ಅನುದಾನ ನೀಡುವ ಮಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಳೆದಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹೊನ್ನಾವರ ಎಸ್‍ಡಿಎಂ ಕಾಲೇಜ್ ನಿವೃತ್ತ ಪ್ರಾಧ್ಯಾಪಕ ಎಸ್ ಡಿ ಹೆಗಡೆ ಮಾತನಾಡಿ, ಸಾಹಿತ್ಯ ಪರಿಷತ್ ಹುಟ್ಟಿಕೊಂಡ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಕನ್ನಡ ಪದ ಕನ್ನುಡಿ ಎಂಬ ಪದದಿಂದ ಕನ್ನಡವಾಗಿದೆ. ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯನ್ನು ಮೈಸೂರು ಇಕೊನೋಮಿಕ್ ಕಾನ್ಫರನ್ಸ್‍ನ ಸರ್ ಎಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದರು. ಅಲ್ಲಿಂದ ಹುಟ್ಟಿದ ಪರಿಷತ್ ಬೇರೆ ಬೇರೆ ಸಾಹಿತಿಗಳ, ವಿದ್ವಾಂಸರ ಶ್ರಮದ ಫಲದಿಂದ ಬೆಳೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಸುಬ್ಬಯ್ಯ ನಾಯ್ಕ ಮಾತನಾಡಿ, ಕನ್ನಡಪರ ಕಾರ್ಯಕ್ರಮ ಮಾಡಲು ಸುಸಜ್ಜಿತ ಭವನ ನಮ್ಮ ತಾಲೂಕಿನಲ್ಲಿ ಇಲ್ಲ. ಕನ್ನಡ ಭವನ ನಿರ್ಮಿಸುವ ಅನಿವಾರ್ಯತೆ ನಮಗಿದೆ. ಕೇಂದ್ರ ಮತ್ತು ರಾಜ್ಯ ಪರಿಷತ್‍ನ ನೆರವಿನಲ್ಲಿ ಕನ್ನಡ ಭವನ ನಿರ್ಮಿಸಲು ಹೋರಾಡುತ್ತೇನೆ. ಸಾಹಿತಿಗಳು, ಕನ್ನಡ ಪ್ರೇಮಿಗಳೆಲ್ಲ ಒಗ್ಗಟ್ಟಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಸಾಪದ ಪ್ರಮುಖರಾದ ಸುರೇಶ ಭಟ್ ಸ್ವಾಗತಿಸಿದರು. ಉಪನ್ಯಾಸಕ ಪ್ರಮೋದ ನಾಯ್ಕ ನಿರೂಪಿಸಿದರು. ನಾಗರಾಜ ಶೆಟ್ಟಿ ವಂದಿಸಿದರು. ಕಸಾಪ ಖಜಾಂಚಿ ಗಿರೀಶ ನಾಯ್ಕ ವನ್ನಳ್ಳಿ, ಕಸಾಪ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Exit mobile version