ಅಂಕೋಲಾ: ವಿಶ್ವ ಪ್ರಸಿದ್ಧಿ ಪಡೆದ ಶ್ರೀಶಾಂತಾದುರ್ಗಾ (ಭೂಮಿತಾಯಿ) ದೇವಿಯ ಬಂಡಿ ಹಬ್ಬ ಮೇ 16 ರಂದು ನಡೆಯಲಿದ್ದು, ಬಂಡಿ ಹಬ್ಬದ ಪ್ರಮುಖ ಆಚರಣೆಯಾದ ದೇವರು ಕರೆಯುವ ಶಾಸ್ತ್ರ ಶುಕ್ರವಾರ ಸಕಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.ಕುಂಬಾರಕೇರಿಯ ಕಳಸ ದೇವಾಲಯದಿಂದ ವಾದ್ಯ ಮೇಳಗಳೊಂದಿಗೆ ಶ್ರೀ ದೇವರ ಕಳಸದ ಮೆರವಣಿಗೆ ಕದಂಬೇಶ್ವರ ದೇವಸ್ಥಾನಕ್ಕೆ ತೆರಳಿ ನಂತರ ಲಕ್ಷ್ಮೇಶ್ವರ ಐಸ್ ಪ್ಯಾಕ್ಟರಿ ಮಾರ್ಗವಾಗಿ ಲಕ್ಷೇಶ್ವರ – ಕೆರೆಕಟ್ಟಾ ಗದ್ದೆ ಬಯಲು ಪ್ರದೇಶದ ಮೂಲಕ ಹನುಮುಟ್ಟಾ ದಾಟಿ ವಂದಿಗೆ ಗೆ ತೆರಳಿ ಅಲ್ಲಿ ಭಕ್ತರಿಂದ ಪೂಜಾ ಸೇವೆಗಳನ್ನು ಸ್ವೀಕರಿಸಿ ಬೋಳೆ ಹೊಸಗದ್ದೆ ಬೊಮ್ಮಯ್ಯ ದೇವರ ಗುಡಿಗೆ ತೆರಳಿ ಶ್ರೀ ಬೊಮ್ಮಯ್ಯ ದೇವರನ್ನು ಹಬ್ಬಕ್ಕೆ ಕರೆಯುವ ಸಂಪ್ರದಾಯ ನಡೆಸಲಾಯಿತು.
ನಂತರ ಕೆರೆಕಟ್ಟೆ ಮೂಲಕ ವಾಪಸ್ಸಾಗಿ ಕಾಳಮ್ಮ ದೇವರ (ಮಹಾಕಾಳಿ) ಎದುರು ಮಂಡಿಯೂರಿ ಸಾಂಪ್ರದಾಯಿಕ ಕರೆ ನೀಡಿತು.ಅಂಕೋಲಾದ ಕಿರು ಬಂಡಿ ಹಬ್ಬ ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದು’ ಇಲ್ಲಿ ದೇವರ ಕಳಸ ಮಂಡಿಯೂರುವ ಸಂಪ್ರದಾಯ ರೋಮಾಂಚನಗೊಳಿಸುವಂತಿದ್ದು,ಸಾವಿರಾರು ಭಕ್ತರ ಹರ್ಷೋದ್ಗಾರ,ಕರತಾಡನದ ನಡುವೆ ಜಾತ್ರೆಯ ವಾತಾವರಣ ಮೂಡಿಸಿತ್ತು.
ದಾರಿಯುದ್ದಕ್ಕೂ ಅಸಂಖ್ಯ ಭಕ್ತರು ಆರತಿ ಸೇವೆ,ವಿಶೇಷ ಹೂಹಾರ ಸಮರ್ಪಿಸಿ ಭೂಮಿ ತಾಯಿಯಲ್ಲಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿಕೊಂಡರು.ಲಕ್ಷ್ಮೇಶ್ವರ ಕೆರೆಕಟ್ಟೆ ಭಾಗದ ನಾಗರಿಕರು ಭಕ್ತರು ಸೇರಿ ರಸ್ತೆಯ ಇಕ್ಕೆಲಗಳಲ್ಲಿ ವಿಶೇಷ ದೀಪಾಲಂಕಾರ ಮಾಡಿ ಹಬ್ಬದ ಕಳೆ ಹೆಚ್ಚಿಸಿದರು, ಪಟ್ಟಣದ ಪೌರಕಾರ್ಮಿಕ ಬಂಧುಗಳ ವಸತಿಗೃಹದ ಹತ್ತಿರ ಸಹ ವಿಶೇಷ ದೀಪಾಲಂಕಾರ ,ಚಿತ್ತಾಕರ್ಷಕ ರಂಗೋಲಿಗಳು ಗಮನಸೆಳೆದವು.ಹನುಮಟ್ಟ ವಂದಿಗೆ ಇತರೆಡೆ ಆಕರ್ಷಕ ತಳಿರು ತೋರಣಗಳು ಕಂಡುಬಂದವು..ಮೇ 16ರ ಸೋಮವಾರ ಅಂಕೋಲಾ ಬಂಡಿಹಬ್ಬ ಜರುಗಲಿದ್ದು ದೇಶ ವಿದೇಶಗಳಲ್ಲಿ ನೆಲೆಸಿರುವ ಅಂಕೋಲಿಗರು ಸೇರಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ