ಅಂಕೋಲಾ: ಭಾನುವಾರ ಬೆಳಿಗಿನ ಜಾವದಿಂದ ಸೋಮವಾರದ ಅವಧಿಯಲ್ಲಿ ತಾಲ್ಲೂಕಿನ ಬೇರೆ ಬೇರೆ ಕಡೆ 3 ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ನಿವಾಸಿ ಚಾಲಕ ವೃತ್ತಿಯ ಜಗದೀಶ ಸಂಜೀವ ಬಂಗೇರ (43) ಈತನು ಲಾರಿಯಲ್ಲಿ ಗೋವಾದಿಂದ ಹೊಳಲ್ಕೆರೆಗೆ ಕಬ್ಬಿಣ ತುಂಬಿ ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ರಾತ್ರಿ 2 ಗಂಟೆಯ ಸುಮಾರಿಗೆ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ಸಮೀಪ ತನಗೆ ವಾಂತಿ ಬರುವುದಾಗಿ ಸಹ ಚಾಲಕ ಶಂಕರಪ್ಪ ಎನ್ನುವವರಲ್ಲಿ ತಿಳಿಸಿ, ಲಾರಿಯಿಂದ ಕೆಳಗೆ ಇಳಿದು ರಸ್ತೆ ಅಂಚಿಗೆ ಇದ್ದ ಅಂಗಡಿ ಪಕ್ಕದ ಬೆಂಚಿನ ಮೇಲೆ ಕುಳಿತವನು ಬೆಳಿಗ್ಗೆ 6 ಗಂಟೆಗೆ ನೋಡಿದಾಗ ಮೃತ ಪಟ್ಟಿರುವುದಾಗಿ ದೂರು ದಾಖಲಿಸಲಾಗಿದೆ.
ಈತನು ವಿಪರೀತ ಸರಾಯಿ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಯಲ್ಲಾಪುರ ಮಾರ್ಗಮಧ್ಯೆ ವಜ್ರಳ್ಳಿ ಬಳಿ ಸ್ನೇಹಿತರೊಂದಿಗೆ ಬಂದಿದ್ದ ಹುಬ್ಬಳ್ಳಿ ಮೂಲದ ಟೈಲ್ಸ್ ಫಿಟ್ಟರ (ಕೂಲಿಕಾರ್ಮಿಕ ) ಎನ್ನಲಾದ ವಸಿಂ ಇಸ್ಮಾಯಿಲ್ ವಿಜಾಪುರ (20) ಎನ್ನುವ ವ್ಯಕ್ತಿ ನದಿ ನೀರಿನಲ್ಲಿ ಸ್ನಾನ ಮಾಡಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ, ನಂತರ ಉಪಚಾರಕ್ಕಾಗಿ 108 ಅಂಬುಲೆನ್ಸ್ ವಾಹನದ ಮೂಲಕ ರಾಮನಗುಳಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮೃತಪಟ್ಟ ಬಗ್ಗೆ ದೂರು ದಾಖಲಾಗಿದೆ.
ಸೋಮವಾರ ಬೆಳಗಿನ ಜಾವ ತಾಲೂಕಿನ ಜಮಗೋಡ ರೈಲ್ವೆ ಸ್ಟೇಷನ್ ಹತ್ತಿರ ,ಸ್ಥಳೀಯ ಬೋಳೆ ಹೊಸಗದ್ದೆ ಗ್ರಾಮದ ರೈತಾಭಿ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದ ವಿಠೋಬ ಪಾಲ್ಗುಣ ಗೌಡ (39 ) ಎಂಬ ಯುವಕನ ಮೃತದೇಹ ರುಂಡ-ಮುಂಡ ಬೇರ್ಪಟ್ಟು ರೈಲ್ವೆ ಹಳಿ ಬಳಿ ಪತ್ತೆಯಾಗಿದೆ.ಈತನು ಸರಾಯಿ ಚಟ ಅಂಟಿಸಿಕೊಂಡು ಆಗಾಗ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದ ಎನ್ನಲಾಗಿದ್ದು ,ಆತ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಕೇಳಿಬಂದಿದೆ.
ತಮ್ಮ ವೃತ್ತಿಯಿಂದ ಶ್ರಮಜೀವಿಗಳಾಗಿರುವ ಈ ಮೂವರು ಪ್ರತ್ಯೇಕ ಪ್ರತ್ಯೇಕ ಪ್ರಕರಣಗಳಲ್ಲಿ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ದುರ್ಮರಣ ಹೊಂದುವಂತಾಗಿದೆ. ಮೃತರ ಬಗ್ಗೆ ಮತ್ತು ಘಟನೆ ಬಗ್ಗೆ ಪೊಲೀಸರಿಂದ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ. ಈ ಮೂವರ ಮೃತದೇಹಗಳನ್ನು ಘಟನಾ ಸ್ಥಳದಿಂದ ತಾಲೂಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ವಿಜಯಕುಮಾರ ವಾಯ್ ನಾಯ್ಕ , ಮತ್ತು ಸ್ಥಳೀಯರು, ಇತರರು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.