ಓಸಿ ಅಡ್ಡೆ ಮೇಲೆ ದಾಳಿ: ಏಜೆಂಟ್ ನನ್ನು ವಶಕ್ಕೆ ಪಡೆದ ಪೊಲೀಸರು: ಮಟಕಾ ಬುಕ್ಕಿಯ ಮೇಲೆಯೂ ದಾಖಲಾಯಿತು ಪ್ರಕರಣ?

ಅಂಕೋಲಾ: ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮಟಕಾ ವ್ಯವಹಾರ ನಡೆಸುತ್ತಿರುವ ಸ್ಥಳಕ್ಕೆ ಅಂಕೋಲಾ ಪೊಲೀಸರು ದಾಳಿ ನಡೆಸಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅವರ್ಸಾ ಮೀನು ಮಾರುಕಟ್ಟೆ ಬಳಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದ ಸಕಲಬೇಣ ನಿವಾಸಿ ದಾಮೋದರ ರಾಮಾ ಗೌಡ(44) ಈತ ಮಟಕಾ ಬರೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ರೂಪಾಯಿ 1270 ನಗದು ಮತ್ತು ಮಟಕಾ ಬರೆಯುವ ಪರಿಕರಗಳೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆತನಿಂದ ಮಟಕಾ ಹಣ ಸಂಗ್ರಹಿಸುತ್ತಿದ್ದ ಎನ್ನಲಾದ ಅವರ್ಸಾದ ರಾಜೇಶ ನಾಯ್ಕ ಎಂಬಾತನ ಮೇಲೆಯೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನೂನು ಕ್ರಮ ಮುಂದುವರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಾಲೂಕಿನ ಬೇರೆ ಬೇರೆ ಕಡೆ ನಾನಾ ಪ್ರಕರಣಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಮತ್ತಿತರ ಮಟ್ಟದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸಹ ಅಕ್ರಮ ಸಾರಾಯಿ ಮಾರಾಟ,ಕಳ್ಳ ರೇತಿ ದಂಧೆ,ಓಸಿ -ಮಟ್ಕಾ – ಜುಗಾರಾಟದಂಥ ಹತ್ತಾರು ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಲೇ ಇದ್ದು,ಆ ಕುರಿತಂತೆ ಅಂಥವರ ವಿರುದ್ಧ ಕೆಲವು ಪ್ರಕರಣಗಳು ದಾಖಲಾಗಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ.

ಎಸ್ಪಿ ಡಾ ಸುಮನ್ ಪನ್ನೇಕರ್ ಮಾರ್ಗದರ್ಶನದಲ್ಲಿ ಹಲವು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ಪೊಲೀಸ ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿಗಳು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version