ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೆರೆಸಿ ಸೇವಿಸಿದ ಮಹಿಳೆ : ನುಚ್ಚು ನೂರಾದ ಬಂಗಾರದ ಬದುಕು ? 

ಅಂಕೋಲಾ: ಸ್ವಯಂ ಉದ್ಯೋಗ ಮಾಡುವರು ಮತ್ತಿತರ ಕಾರಣಗಳಿಂದ ಊರಿನ  ಸಂಘಗಳಲ್ಲಿ ಸಾಲ ಮಾಡಿದ್ದಲ್ಲದೇ, ಹಣಕಾಸು ಸಂಸ್ಥೆಯಲ್ಲಿ ಬಂಗಾರದ ಮೇಲೆ ಸಾಲ ಪಡೆದ ಮಹಿಳೆಯೋರ್ವಳು ವ್ಯವಹಾರಿಕ ನಷ್ಟ ಇಲ್ಲವೇ ಇತರೆ ತೊಂದರೆಗಳಿಂದ ಸಂಘಗಳಿಂದ ಪಡೆದ ಸಾಲ ತೀರಿಸಲಾಗದೇ ಮತ್ತು ಫೈನಾನ್ಸ ನಿಂದ  ಬಂಗಾರ ಅಡವಿಟ್ಟು ಪಡೆದ ಸಾಲದ  ಬಡ್ಡಿ ತೀರಿಸಲಾಗದೇ,  ಒಡವೆಗಳು ಹರಾಜಿಗೆ ಬಂದ ಕಾರಣ ಮನನೊಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾರವಾಡ ತರಂಗಮೇಟದಲ್ಲಿ ಸಂಭವಿಸಿದೆ.

ತರಂಗಮೇಟ ನಿವಾಸಿ ಸುಲೋಚನಾ ಕೀರಾ ಹರಿಕಂತ್ರ(30) ಮೃತ ದುರ್ದೈವಿಯಾಗಿದ್ದು ಸಾಲ   ತೀರಿಸಲು ಸಾಧ್ಯವಾಗದೇ ಮನ ನೊಂದ ಈಕೆ ಜೂನ್ 6 ರಂದು ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೆರಸಿ ಸೇವಿಸಿದ್ದಳು. ತೀವ್ರ ಅಸ್ವಸ್ಥಗೊಂಡ ಅವಳನ್ನು ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಜೂನ್ 11 ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಜೂನ್ 13 ರ ಸಂಜೆ ಸುಲೋಚನಾ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. 

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ, ಮೃತ ಸುಲೋಚನಾಳ ಸಹೋದರಿಯ ಪತಿ (ಭಾವ)ಮಾದನಗೇರಿ ನಿವಾಸಿ ಸುರೇಂದ್ರ ವಿಷ್ಣು ಹರಿಕಂತ್ರ ಪೊಲೀಸ್ ದೂರು ನೀಡಿದ್ದು,  ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಲ ತೆಗೆದುಕೊಳ್ಳುವ ಮುನ್ನ ಎಚ್ಚರ

ಆರಂಭದಲ್ಲಿ ಕೈಗೆ ಸಾಲ ಸುಲಭದಲ್ಲಿ ಸಿಗುವುದೆಂದು ಚಿನ್ನ ಗಿರವಿ ಇಡುವುದು, ಅಥವಾ ಬೇರೆ-ಬೇರೆ ರೀತಿ ಸಾಲ ಪಡೆದು,ನಂತರ ದುಬಾರಿ ಬಡ್ಡಿ ತೀರಿಸಲಾಗದೇ  ಬಡ್ಡಿ ಚಕ್ರದೊಳಗೆ ಸಿಲುಕಿ ನರಕ ಯಾತನೆ ಅನುಭವಿಸುವ ಇಲ್ಲವೇ ಸಾವಿಗೆ ಶರಣಾಗುವ ಮುನ್ನ ಸಾಲದ ಮೇಲಿನ ಬಡ್ಡಿ ದರ ಮತ್ತಿತರ ಪೂರಕ ಅಂಶಗಳನ್ನು ಗಮನಿಸಿ ವ್ಯವಹರಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version