Important
Trending

ಅರಣ್ಯ ಪ್ರದೇಶದಲ್ಲಿ ಪೋಲೀಸರ  ಭರ್ಜರಿ ಬೇಟೆ ? ಅಪಾರ ಪ್ರಮಾಣದ ಗಾಂಜಾ ವಶಕ್ಕೆ: ಆರೋಪಿ ಬಂಧನ

ಅಂಕೋಲಾ: ಅಕ್ರಮವಾಗಿ ಮಾದಕ ದ್ರವ್ಯ ವಸ್ತು  ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳೆ ಸೇರಿದಂತೆ ಇಬ್ಬರನ್ನು ಜಿಲ್ಲಾ ವಿಶೇಷ ವಿಭಾಗದ ಪೊಲೀಸರು ತಾಲೂಕಿನ (ಅರಣ್ಯ ಪ್ರದೇಶ) ಅಚವೆ ವ್ಯಾಪ್ತಿಯ ಹೊಸಕಂಬಿ ಬಳಿ ಬಂಧಿಸಿ ಮಾದಕ ವಸ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.  ಅಚವೆ ವಾಡಗಾರ ನಿವಾಸಿ ಹೊಟೇಲ್ ವ್ಯಾಪಾರಿ ವಿಷ್ಣು ದೇವಯ್ಯ ಮರಾಠಿ (34)ಮತ್ತು ಲಕ್ಷ್ಮೀ ದಿವಾಕರ ಮರಾಠಿ ಬಂಧಿತ ಆರೋಪಿಗಳಾಗಿದ್ದು ಇವರಿಂದ ಸುಮಾರು 55 ಸಾವಿರ ರೂಪಾಯಿ ಮೌಲ್ಯದ 905 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 

ದಿವಾಕರ ಮರಾಠಿ ಈತನು ಲಕ್ಷ್ಮೀ ಮರಾಠಿ ಇವಳಿಂದ ಮಾರಾಟ ಮಾಡುವ ಉದ್ದೇಶದಿಂದ  ಗಾಂಜಾ ಖರೀದಿಸಿ ಅದನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ. *ಎಸ್ಪಿ ಡಾ. ಸುಮನ್ ಪೆನ್ನೇಕರ್ ಖಡಕ್ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ಅಂಕೋಲಾ ತಾಲೂಕಿನಲ್ಲಿ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುವಂತೆ ತೋರುತ್ತಿದ್ದರೂ,ಯುವಕರ ಭವಿಷ್ಯವನ್ನು ಹಾಳು ಮಾಡುವ ಮಾದಕ ದ್ರವ್ಯದ ಜಾಲ ಭೇಧಿಸಲು ಹೆಚ್ಚಿನ ಮನಸ್ಸು ಮಾಡುತ್ತಿಲ್ಲ ಎಂದು ವಕೀಲ ಉಮೇಶ ನಾಯ್ಕ ನೇರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಗಾಂಜಾ ಜಾಲ ಬೇಧಿಸುವಂತೆ ಇಲಾಖೆಗೆ ಆಗ್ರಹಿಸಿದ್ದರು. ಇದು ವಿಸ್ಮಯ ವಾಹಿನಿಯಲ್ಲೂ ಬಿತ್ತರಗೊಂಡಿತ್ತು.

ಅದಾದ ಬಳಿಕ ಇತ್ತೀಚಿನ ದಿನಗಳಲ್ಲಿಯೇ ಗಾಂಜಾ ವಿರುದ್ಧ ತಾಲೂಕಿನ ಬೃಹತ್ ಭೇಟೆ ಎನ್ನುವಂತೆ ಪೊಲೀಸರು ದಾಳಿ ನಡೆಸಿ ಆರೋಪಿಗಳ ಸಹಿತ ಗಾಂಜಾ ವಶಪಡಿಸಿಕೊಂಡು ಮಾದಕ ಜಾಲದವರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಈ ಹಿಂದೆ ಅಂಕೋಲಾದಲ್ಲಿ ದಕ್ಷತೆಯಿಂದ  ಕರ್ತವ್ಯ ನಿರ್ವಹಿಸಿ, ಹಾಲಿ ಡಿ ಎಸ್ ಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೇಮನಗೌಡ ಪಾಟೀಲ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿರುವುದಕ್ಕೆ ಮತ್ತು ಅವರಿಗೆ ಮಾರ್ಗದರ್ಶನ ಮಾಡಿದ ಹಿರಿಯ ಅಧಿಕಾರಿಗಳಿಗೆ ನ್ಯಾಯವಾದಿ ಉಮೇಶ ನಾಯ್ಕ ಸೇರಿದಂತೆ ಇತರೆ ಪ್ರಜ್ಞಾವಂತ ವಲಯದಿಂದ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಇಂತಹ ಇನ್ನಷ್ಟು ನಿರಂತರ ದಾಳಿಗಳ ಮೂಲಕ ಇಲಾಖೆ ತನ್ನ ಕಾರ್ಯಕ್ಷಮತೆ ತೋರಿಸುವುದರೊಂದಿಗೆ,ಅಕ್ರಮ ದಂಧೆ ಕೋರರನ್ನು ಹೆಡೆಮುರಿ ಕಟ್ಟುವಂತಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಅಂಕೋಲಾ ಪೋಲೀಸ್ ಠಾಣೆಯ ಇನ್ನೊಂದು ಪ್ರತ್ಯೇಕ  ಪ್ರಕರಣದಲ್ಲಿ,  ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು  ವಶಕ್ಕೆ ಪಡೆದಿರುವ ಅಂಕೋಲಾ ಪೊಲೀಸರು, ಆರೋಪಿತ ನಿಂದ  ಕರ್ನಾಟಕ ರಾಜ್ಯದಲ್ಲಿ ತಯಾರಾದ ಸರಾಯಿ ಸ್ಯಾಚೆಟ್ ಗಳನ್ನು ಮತ್ತು ಒಂದು ದ್ವಿಚಕ್ರ ವಾಹನ  ವಶಪಡಿಸಿಕೊಂಡಿದ್ದಾರೆ. 

ಅಚವೆ ಬೊರಳ್ಳಿ ನಿವಾಸಿ ಗಣಪತಿ ಮಹಾಬಲೇಶ್ವರ ಪಟಗಾರ (52) ಬಂಧಿತ ಆರೋಪಿಯಾಗಿದ್ದು ಆತನಿಂದ ಸುಮಾರು 9970 ರೂಪಾಯಿ ಮೌಲ್ಯದ ಹೆವರ್ಡ್ ಚಿಯರ್ಸ್ ವಿಸ್ಕಿಯ 284 ಸ್ಯಾಚೆಟ್ ಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ಮಹೇಂದ್ರ ಡ್ಯೂರೋ ವಾಹನ  ವಶಪಡಿಸಿಕೊಂಡಿದ್ದಾರೆ.

ಅಂಕೋಲಾ ಸಿಪಿಐ  ಸಂತೋಷ ಶೆಟ್ಟಿ ನೇತ್ರತ್ವದಲ್ಲಿ ನಡೆದ  ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button