ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪನ್ಯಾಸ

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ

ಕುಮಟಾದ ಗೋರೆಯ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 15-07-2022 ರ ಶುಕ್ರವಾರದಂದು ಸಂಸ್ಥಾಪನಾ ದಿನಾಚರಣೆ ಮತ್ತು ವಿದ್ಯಾರ್ಥಿ ಪ್ರೇರಣಾ ಉಪನ್ಯಾಸ ಜರುಗಿತು.. ಕರುನಾಡು ಕಂಡ ಯುವ ವಾಗ್ಮಿಗಳು, ಅಂಕಣಕಾರರು, ಚಿಂತಕರು, ಯುವ ಬ್ರಿಗೇಡ್ ಸಂಸ್ಥಾಪಕರಾದ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.. ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಮಾತನಾಡಿದ ಶ್ರೀಯುತರು ಯಾವ ವಿಧದಲ್ಲಿ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಇಂದಿಗೂ ಪ್ರತಿಯೊಬ್ಬ ನಾಗರಿಕನ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದು ತಿಳಿಸಿದರು.. ಮುಂದುವರೆದು, ಭಾರತೀಯ ವಿಜ್ಞಾನ ಲೋಕ ಹಾಗೂ ಭಾರತೀಯರ ದೇಶಪ್ರೇಮದ ಕುರಿತು ಜ್ವಲಂತ ನಿದರ್ಶನಗಳನ್ನು ನೀಡಿ ಸವಿಸ್ತಾರವಾಗಿ ಒಂದು ಘಂಟೆಯ ಕಾಲ ವಿವರಿಸಿದರು..

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು, ಕಳೆದ ವರ್ಷ ಇದೇ ದಿನ ಕಾಲೇಜು ಲೋಕಾರ್ಪಣೆಗೊಂಡಿತ್ತು ಎಂದು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.. ಅಂತೆಯೇ  ಚಕ್ರವರ್ತಿ ಸೂಲಿಬೆಲೆಯವರನ್ನು ನಮ್ಮ ಸಂಸ್ಥೆಗೆ ಬರಮಾಡಿಕೊಳ್ಳುವುದು, ಅವರಿಂದ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ನಮ್ಮ ಬಹುದಿನದ ಕನಸಾಗಿತ್ತು.. ಈ ಶುಭದಿನದಂದು ಕಂಡ ಕನಸು ನನಸಾಯಿತು ಎಂದು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತಮ್ಮ ಖುಷಿಯನ್ನು ಹಂಚಿಕೊಂಡರು..

ಆರಂಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಸಿಂಧು ಹೆಗಡೆ ಮತ್ತು ಬಳಗದವರು ಪ್ರಾರ್ಥಿಸಿದರು.. ರಸಾಯನಶಾಸ್ತ್ರ ಉಪನ್ಯಾಸಕ ಶ್ರೀ ಈಶ್ವರ ಶರ್ಮ ಪಕಳಕುಂಜ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು.. ಗಣಿತಶಾಸ್ತ್ರ ಉಪನ್ಯಾಸಕ ಶ್ರೀ ಹರ್ಷ ಗಣೇಶ ಉಪಾಧ್ಯಾಯ ವಂದಿಸಿದರು.. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕುಮಾರಿ ಹರ್ಷಿತಾ ಎಸ್ ವಿ ಕಾರ್ಯಕ್ರಮವನ್ನು ನಿರೂಪಿಸಿದರು..

ಇದೇ ಸಂದರ್ಭದಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.. ಕಾಲೇಜಿನ ಉಪನ್ಯಾಸಕ ವೃಂದ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ, ಪಾಲಕರು, ಪತ್ರಕರ್ತರು ಮತ್ತು ಅನೇಕ ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..

ವಿಸ್ಮಯ ನ್ಯೂಸ್, ಕುಮಟಾ

Exit mobile version