ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ಮಹಾನ್ ಯಂತ್ರಗಳು.
ಜಿಲ್ಲಾಧಿಕಾರಿ, ಕ್ರಿಮ್ಸ್ ನಿರ್ದೇಶಕರ ಜನಪರ ಕಾಳಜಿಯ ಧ್ಯೋತಕ
ಕಾರವಾರ : ತೀವ್ರ ಉಸಿರಾಟದ ಸಮಸ್ಯೆ ಮತ್ತಿತ್ತರ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವರದಾನವಾಗುವ ವೈದ್ಯಕೀಯ ಲೋಕದ ಅಚ್ಚರಿಯ ಮಹಾನ್ ಯಂತ್ರವೆಂದೇ ಗುರುತಿಸಿಕೊಂಡಿರುವ ವೆಂಟಿಲೇಟರ್ ಗಳು ಆ ಆಸ್ಪತ್ರೆಯ ಪ್ರಗತಿಯ ಸಂಕೇತವೂ ಹೌದು. ಕೋವಿಡ್-19 ಸಂದರ್ಭಗಳಲ್ಲಿಯಂತೂ ವೆಂಟಿಲೇಟರ್ ಮಹತ್ವ ಜಗತ್ತಿಗೆ ಅರಿವಾಗಿದೆ. ಹಲವು ಮುಂದುವರೆದ ರಾಷ್ಟ್ರಗಳಲ್ಲಿ ವೆಂಟಿಲೇಟರ್‌ಕೊರತೆಯಿಂದ ಅದೆಷ್ಟೋ ರೋಗಿಗಳ ಪ್ರಾಣಪಕ್ಷಿ ಹಾರಿ ಹೋಗಿದೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವ್ಯವಸ್ಥೆಗಳನ್ನು ಮೇಲ್ಮಟ್ಟಕ್ಕೆ ಏರಿಸಿ ಜಿಲ್ಲೆಯ ಜನತೆಯ ಆರೋಗ್ಯ ಕಾಳಜಿಗೆ ಒತ್ತು ನೀಡಲು ಶ್ರಮವಹಿಸುತ್ತಿದ್ದ ಜನಪರ ಕಾಳಜಿಯ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರವರಿಗೆ ಸಾಥ್ ನೀಡಲು ಕ್ರಿಮ್ಸ್ ನ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ.ಗಜಾನನ ನಾಯಕ ಟೊಂಕಕಟ್ಟಿ ನಿಂತಿರುವುದು ಜಿಲ್ಲೆಯ ಜನತೆಯ ಸೌಭಾಗ್ಯವೆಂದೇ ಹೇಳಬಹುದು. ಯುವ ಉತ್ಸಾಹಿ ಅಧಿಕಾರಿ ಜಿ.ಪಂ ಸಿಇಓ ರೋಶನ್.ಎಂ ಸಹ ಉತ್ತಮ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ.
ಕ್ರಿಮ್ಸ್ ನ ನಿರ್ದೇಶಕರಾಗಿ ಡಾ.ಗಜಾನನ ನಾಯಕ ಅಧಿಕಾರ ವಹಿಸಿಕೊಳ್ಳುವದಕ್ಕೂ ಪೂರ್ವ ಕೇವಲ 3 ವೆಂಟಿಲೇಟರ್‌ಗಳಿದ್ದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಇಂದು 15 ವೆಂಟಿಲೇಟರ್ ಗಳನ್ನು ಹೊಂದಿದ್ದು ತನ್ನ ಸೇವಾ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದೆ. ಜಿಲ್ಲಾಡಳಿತದಿಂದ 5, ವೈದ್ಯಕೀಯ ನಿರ್ದೇಶನಾಲಯದಿಂದ 3 ವೆಂಟಿಲೇಟರ್ ಸೌಲಭ್ಯ ದೊರಕಿಸಿಕೊಟ್ಟ ಜಿಲ್ಲಾಧಿಕಾರಿಗಳು, ಸಂಬಂಧಿಸಿ ಇತರೇ ಇಲಾಖೆಗಳು ತೆಗೆದುಕೊಂಡ ಕ್ರಮ ಪ್ರಸ್ತುತ ಪರಿಸ್ಥಿತಿಯಲ್ಲಿ ಉತ್ತಮವಾಗಿವೆ. ಇದೇ ವೇಳೆ ಡಾ.ಗಜಾನನ ನಾಯಕ ಮತ್ತಷ್ಟು ವಿಶೇಷ ಆಸಕ್ತಿವಹಿಸಿ ಇನ್‍ಪೋಸಿಸ್‍ನ ಶ್ರೀಮತಿ ಸುಧಾಮೂರ್ತಿ ಅವರಿಂದ ಕೊಡುಗೆಯಾಗಿ 3 ವೆಂಟಿಲೇಟರ್ ಸೌಲಭ್ಯ ಪಡೆದುಕೊಂಡರು. ಬೆಂಗಳೂರಿನ ಆಶ್ರಯಹಸ್ತ ಟ್ರಸ್ಟ 1 ವೆಂಟಿಲೇಟರ್ ನೆರವಿನ ಹಸ್ತ ನೀಡುವುದರೊಂದಿಗೆ ಒಟ್ಟಾರೇಯಾಗಿ 15 ವೆಂಟಿಲೇಟರ್ ಸೌಲಭ್ಯ ದೊರೆತಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ಹೆಗ್ಗಳ್ಳಿಕೆಯೇ ಸರಿ.
ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ, ಜಿ.ಪಂ ಸಿಇಓ ರೋಶನ್.ಎಂ, ಇನ್ಪೋಸಿಸಸ್ ಶ್ರೀಮತಿ ಸುಧಾಮೂರ್ತಿ, ಆಶ್ರಯ ಹಸ್ತ ಟ್ರಸ್ಟ್ ಬೆಂಗಳೂರು, ಡಾ. ಕೃಷ್ಣಪ್ರಸಾದ, ನೇತ್ರತಜ್ಞರು, ಎಂ.ಎಂ ಜೋಶಿ ಆಸ್ಪತ್ರೆ ಹುಬ್ಬಳ್ಳಿ ಹಾಗೂ ಡಾ. ಶಿರಿಶ್ ನೆಲವಿಗಿ ಆಸ್ಪತ್ರೆ ಬೆಂಗಳೂರು ಇವರೆಲ್ಲರ ಸಹಕಾರವನ್ನು ಕ್ರಿಮ್ಸ್ ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತಿದೆ.
ಸಂಸ್ಥೆಯ ನಿರ್ದೇಶಕರಾದ ಡಾ. ಗಜಾನನ ನಾಯಕ, ವೈದ್ಯಕೀಯ ಅಧೀಕ್ಷಕರು ಡಾ. ಶಿವಾನಂದ ಕುಡ್ತಾರಕರ, ಆರ್.ಎಂ.ಓ ಡಾ.ವೆಂಕಟೇಶ ಆರ್, ಪ್ರಾಧ್ಯಾಪಕರಾದ ಡಾ. ಶಿವಕುಮಾರ ಜಿ.ಎಲ್, ಡಾ. ಮಂಜುನಾಥ ಟಿ. ಭಟ್, ಡಾ.ಮಧುಕರ್ ಕೆ.ಟಿ ಮತ್ತಿತ್ತರ ಸಿಬ್ಬಂದಿಗಳು ಹೊಸ ವೆಂಟಿಲೇಟರ್ ಯಂತ್ರವನ್ನು ಪರಿಶೀಲಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.