ಅಂಕೋಲಾ: ಕಳೆದ ಕೆಲ ದಿನಗಳ ಹಿಂದೆ ಅಬ್ಬರಿಸಿದ ಮಳೆಯಿಂದ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿ ಜಿಲ್ಲೆಯ ಕೆಲ ಪ್ರವಾಸಿ (ಜಲಪಾತ ) ತಾಣಗಳಲ್ಲಿ ಅಪಾಯದ ಸಾಧ್ಯತೆ ಮನಗಂಡು ಪ್ರವಾಸಿಗರಿಗೆ ತಾತ್ಕಾಲಿಕ ನಿಷೇಧ ಹೇರಲಾಗಿತ್ತು. ಈ ವೇಳೆ ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಭೂತಿ ಪಾಲ್ಸ್ ಗೂ ಪ್ರವಾಸಿಗರು ಬಾರದಂತೆ ಆದೇಶಿಸಲಾಗಿತ್ತು.
ಇದನ್ನೂ ಓದಿ: ಉತ್ತರಕನ್ನಡದ ಜೇನುಕೃಷಿಕನನ್ನು ಶ್ಲಾಘಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರವಿವಾರ ಅಡ್ಲೂರಿನಲ್ಲಿ ಕೃಷಿ ಉತ್ತೇಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು,ಬಳಿಕ ಅಚುವೆ ವಿಭೂತಿ ಫಾಲ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸಿಲ್ದಾರ್ ಉದಯ್ ಕುಂಬಾರ್, ಸ್ಥಳೀಯ ಆರ್ ಎಫ್ ಓ ಸುರೇಶ ನಾಯ್ಕ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಕೆಲವು ದಿನಗಳ ಹಿಂದೆ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿದು ಗುಡ್ಠಗಾಡು ಪ್ರದೇಶಗಳಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶ ನಿಷೇದಿಸಿ ಆದೇಶ ಹೊರಡಿಸಿರುವುದರಿಂದ ಅರಣ್ಯ ಇಲಾಖೆ ಮತ್ತು ಗ್ರಾಮ ಅರಣ್ಯ ಸಮಿತಿ ವತಿಯಿಂದ ಜಲಪಾತದ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು, ಇದೀಗ ಮಳೆಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದು, ವಾರದಿಂದೀಚೆಗೆ ಮಳೆ ಸುರಿಯದಿರುವ ಕಾರಣ ಇದೀಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಲಾಗಿರುವ ನಿರ್ಬಂಧ ಹಿಂಪಡೆಯಲು ಜಿಲ್ಲಾಧಿಕಾರಿಗಳು ಸೂಚಿಸಿರುವುದಾಗಿ ತಿಳಿದು ಬಂದಿದೆ.
ಇದರಿಂದ ಅಗಸ್ಟ್ 1 ರಿಂದ ವಿಭೂತಿ ಪಾಲ್ಸ್ ಪ್ರದೇಶಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.ಆದರೂ ಜಿಲ್ಲೆಯ ಫಾಲ್ಸ್, ಸಮುದ್ರ ತೀರ ಮತ್ತಿತರೆಡೆ ಆಗಮಿಸುವ ಪ್ರವಾಸಿಗರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.