ಅಂಕೋಲಾ : ಪೃಕೃತಿದತ್ತ ವನೌಷಧಿ ಮತ್ತಿತರ ಹರ್ಬಲ್ ಪ್ರಾಡಕ್ಟ್ ತಯಾರಿಕಾ ಖಾಸಗಿ ಘಟಕವೊಂದರಲ್ಲಿ ಕೆಲಸ ನಿರ್ವಹಿಸಲು ಯುವತಿಯೋರ್ವಳು ಬೆಳಿಗ್ಗೆ ಬೇಗನೆ ಎದ್ದು ಮನೆಯ ಹೊರಗಿನ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವಾಗ, ಹತ್ತಿರದಿಂದ ಇಣುಕಿ ನೋಡಿದ್ದಲ್ಲದೆ ಮೊಬೈಲ್ ಮೂಲಕ ವಿಡಿಯೋ ಮಾಡಲೆತ್ನಿಸಿದ ವ್ಯಕ್ತಿಯೋರ್ವನ ಮೇಲೆ ಪೊಲೀಸ್ ದೂರು ದಾಖಲಾದ ಘಟನೆ ನಡೆದಿದೆ.
ಮಾರುತಿ (34) ಕೇಣಿ ಎಂಬಾತನೇ ಆರೋಪಿಯಾಗಿದ್ದು ಈತ ತನ್ನೂರಿನ ಪಕ್ಕದ ಗ್ರಾಮಕ್ಕೆ ಹೋಗಿ ಬೆಳಗಿನ ಜಾವ ಅಲ್ಲಿನ ಮನೆಯೊಂದರ ಹೊರಗಿನ ಕಂಪೌಂಡ ಗೋಡೆ ಹತ್ತಿ, ಪಕ್ಕದಲ್ಲೇ ಇರುವ ಸ್ನಾನ ಗೃಹದಲ್ಲಿ (ಕಚ್ಚಾ ಬಾತರೂಂ ) ಇಣುಕಿ ನೋಡಿ ಅಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಲು ಮುಂದಾಗಿದ್ದ ಎನ್ನಲಾಗಿದೆ.
ಅದನ್ನು ಗಮನಿಸಿದ ಯುವತಿ ಕಂಗಾಲಾಗಿ ಕಿರುಚಿಕೊಂಡು ಮನೆಯವರಿಗೆ ವಿಷಯ ತಿಳಿಸುವಷ್ಟರಲ್ಲಿ, ಬಿದ್ದೆನೋ ಎದ್ದೆನೋ ಎನ್ನುತ್ತ ಕಳ್ಳ ಬೆಕ್ಕಿನಂತೆ ಸ್ಥಳದಿಂದ ಕಾಲ್ಕಿತ್ತು ಓಡಿ ಹೋಗಲು ಯತ್ನಿಸಿದ್ದ ಆರೋಪಿಯನ್ನು ಹಿಡಿದ ಸ್ಥಳೀಯರು, ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.
ಈ ಕುರಿತು ನೊಂದ ಯುವತಿ ಪೊಲೀಸ್ ದೂರು ನೀಡಿದ್ದು , ಸ್ತ್ರೀಯರ ಮಾನಕ್ಕೆ ಕುಂದುಂಟು ಮಾಡುವ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿ ಮಾರುತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಹಿಂದೆ ಚಿಕ್ಕ ಪುಟ್ಟ ಟೇಲರಿಂಗ್ ಕೆಲಸ ಮಾಡುತ್ತಿದ್ದ ಈತ, ತನ್ನ ಪಕ್ಕದೂರಿಗೆ ಹಾಲು ವ್ಯಾಪಾರ ಮತ್ತಿತರ ಕಾರಣಕ್ಕೆ ಆಗಾಗ ಬಂದು ಹೋಗುತ್ತಿದ್ದ ಎನ್ನಲಾಗಿದ್ದು, ಆತ ಒಳ್ಳೆಯವನಿರಬಹುದು ಎಂದು ತಿಳಿದು ಕೊಂಡ ಕೆಲ ಸ್ಥಳೀಯರೂ ಸಹ ಈತನ ಕಚಡಾ ಕೆಲಸಕ್ಕೆ ಉಗಿಯುವಂತೆ ಆಗಿದೆ ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿದೆ.