ಅಂಕೋಲಾ: ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದ ಆವರಣದಲ್ಲಿರುವ ಸುವರ್ಣ ಧ್ವಜ ಸ್ಥಂಭದ ಹಿಂಬದಿ ಇರುವ ಮರದ ಕೊಂಬೆಯೊಂದಕ್ಕೆ ದೊಡ್ಡ ಗಾತ್ರದ ಹೆಜ್ಜೇನು ಗೂಡೊಂದು ಕಂಡು ಬರುತ್ತಿದ್ದು, ಹೆಜ್ಜೇನು ದಾಳಿಯಿಂದ ಅಪಾಯವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಬಂಧಿತ ಅರಣ್ಯ ಹಾಗೂ ಇತರೆ ಇಲಾಖೆಗಳು ಅಗತ್ಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೂಡಲೇ ಜೇನು ತೆರವಿಗೆ ಮುಂದಾಗಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಸುವರ್ಣ ಧ್ವಜ ಸ್ಥಂಭದ ಹಿಂಬದಿ ಮರದಲ್ಲಿ ಹೆಜ್ಜೇನು ಗೂಡು
ಸ್ಮಾರಕ ಭವನದ ಆವರಣದಲ್ಲಿ ಇರುವ ಸುವರ್ಣ ಧ್ವಜ ಸ್ಥಂಭದ ಹಿಂಬದಿ ಇರುವ ಮರದಲ್ಲಿ ಹೆಜ್ಜೇನು ಗೂಡು ಕಂಡು ಬಂದಿದ್ದು, ಆಗಾಗ ಕಾಗೆ ಮತ್ತಿತರ ಪಕ್ಷಿಗಳು ಜೇನು ಗೂಡನ್ನು ಕುಕ್ಕುವ ಪ್ರಯತ್ನ ನಡೆಸುತ್ತವೆ.
ಅಲ್ಲದೇ ಜೋರಾದ ಮಳೆ ಗಾಳಿಯಿಂದ ಇಲ್ಲವೇ ಯಾರಾದರೂ ಕಿಡಿಗೇಡಿಗಳಿಂದ ಜೇನು ಗೂಡಿಗೆ ಹಾನಿಯಾದರೆ ಜೇನುನೊಣಗಳು ಕೆರಳಿ (ರೊಚ್ಚಿಗೆದ್ದು ) ಸುತ್ತಮುತ್ತಲ ಪ್ರದೇಶಗಳಲ್ಲಿರುವವರ ಮೇಲೆಯೂ ದಾಳಿ ನಡೆಸಬಹುದಾದ ಅಪಾಯದ ಸಾಧ್ಯತೆ ಇದೆ ಎನ್ನುವ ಮಾತು ಸ್ಥಳೀಯರರಿಂದ ಕೇಳಿ ಬಂದಿದ್ದು ಈ ಕುರಿತು ಸಂಬಂಧಿತ ಇಲಾಖೆಯವರು ನಿರ್ಲಕ್ಷ ತೋರದೇ ಕೂಡಲೇ ಜೇನು ಗೂಡು ತೆರವುಗೊಳಿಸಿ ಸ್ಥಳೀಯರ ಆತಂಕ ದೂರಮಾಡಬೇಕಿದೆ.
ಅಪಾಯದ ಸಾಧ್ಯತೆ ಹೆಚ್ಚು?
ಸ್ಮಾರಕ ಭವನದ ಆವರಣ ಹಾಗೂ ಸಮಾಜ ಮಂದಿರದ ಎದುರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆಯುವ ಸ್ಥಳ ಅತೀ ಹತ್ತಿರದಲ್ಲಿದ್ದು ಪ್ರಾದೇಶಿಕ ಸೂಕ್ಷ್ಮತೆ ಅರಿತು ತುರ್ತು ಕ್ರಮ ಕೈಗೊಳ್ಳದಿದ್ದರೆ ಅಪಾಯದ ಸಾಧ್ಯತೆಗಳೇ ಹೆಚ್ಚಿದೆ. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು – ಜನಪ್ರತಿನಿಗಳು, ಸಾರ್ವಜನಿಕರು, ಇತರರು ಸೇರಿ ಸಾವಿರಾರು ಜನ ಒಂದೆಡೆ ಸೇರಿದಾಗ ಜೇನು ನೊಣಗಳು ಗುಂಪು ದಾಳಿ ನಡೆಸಿದರೆ ಪರಿಣಾಮ ಊಹಿಸಲು ಕಷ್ಟ ಸಾಧ್ಯ ಎನ್ನುತ್ತಾರೆ ಸ್ಥಳೀಯರು.
ಸ್ವಾತಂತ್ರ್ಯೋತ್ಸವ ಹೊರತಾಗಿ ಸ್ಮಾರಕ ಭವನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು,
ಜೇನು ಗೂಡು ಕಟ್ಟಿರುವ ಆಸುಪಾಸಿನಲ್ಲೇ ಇರುವ ಪುರಸಭೆ ಕಾರ್ಯಾಲಯ, ತಾಲೂಕು ಪಂಚಾಯಿತಿ ಕಚೇರಿ, ಜಿ.ಪಂ ಇಂಜೀನಿಯರಿಂಗ ವಿಭಾಗ,ಚಿಕ್ಕ ಮಕ್ಕಳ ಆಸ್ಪತ್ರೆ, ದಂತ ಆಸ್ಪತ್ರೆ, ನೂರಾರು ವ್ಯಾಪಾರಿ ಮಳಿಗೆಗಳು, ಹತ್ತಾರು ಶೈಕ್ಷಣಿಕ ಸಮೂಹ ಸಂಸ್ಥೆಗಳು, ಬಸ್, ಟೆಂಪೋ, ಕಾರ್, ರಿಕ್ಷಾ ಸ್ಟ್ಯಾಂಡಗಳು, ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು , ಪೆಟ್ರೋಲ್ ಪಂಪ್, ಹೋಟೇಲ್, ಹಾಲು ಮತ್ತಿತರ ಜೀವನಾವಶ್ಯಕ ಸಾಮಗ್ರಿಗಳ ಅಂಗಡಿ ಇದ್ದು ಪ್ರತಿನಿತ್ಯ ಸಾವಿರಾರು ಜನರು ನಾನಾ ಕಾರಣಗಳಿಂದ ಈ ಭಾಗದಲ್ಲಿ ಓಡಾಡಿಕೊಂಡಿರಬೇಕಾದ ಅನಿವಾರ್ಯತೆ ಇದೆ.
ಅಧಿಕಾರಿಗಳಿಂದ ಮುನ್ನೆಚ್ಚರಿಕೆ ಅಗತ್ಯ:
ಈ ಹಿಂದೆ ಕೆ. ಎಲ್. ಇ ರಸ್ತೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಸೇರಿ ಕೆಲವರ ಮೇಲೆ ಹೆಜ್ಜೇನುಳ ದಾಳಿ ಮಾಡಿ, ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಯನ್ನು ಸ್ಮರಿಸಬಹುದಾಗಿದ್ದು ಮತ್ತೆ ಅಂತಹ ಘಟನೆ (ಜೇನು ದಾಳಿ ) ಮರುಕಳಿಸದಂತೆ ಅರಣ್ಯ ಇಲಾಖೆ ಸಾರ್ವಜನಿಕ ಹಿತಾಸಕ್ತಿಯಿಂದ ಪರಿಸ್ಥಿತಿಯ ಗಂಭೀರತೆ ಅರಿತು ತನ್ನ ಜವಾಬ್ದಾರಿ ನಿಭಾಯಿಸ ಬೇಕಿದೆ.