ಲಾರಿ ಮುಳುಗಿ ನದಿ ನೀರಲ್ಲಿ ಕೊಚ್ಚಿ ಹೋದವ 48 ತಾಸಿನ ಬಳಿಕ ಶವವಾಗಿ ಪತ್ತೆ: ಶೋಧ ಕಾರ್ಯಾಚರಣೆಯಲ್ಲಿ ವಿಶೇಷವಾಗಿ ಶ್ರಮಿಸಿದ ಸ್ಥಳೀಯರ ಬಗ್ಗೆ ಪ್ರಶಂಸೆ
ಅಂಕೋಲಾ: ಆಗಸ್ಟ್ 24 ರ ಬುಧವಾರ ಸಾಯಂಕಾಲದ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿರುವ ಪಣಸಗುಳಿ ಸೇತುವೆ ಮೇಲಿಂದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಲಾರಿಯಲ್ಲಿ ವ್ಯಕ್ತಿಯೋರ್ವ ಸಿಲುಕಿಕೊಂಡಿರುವ ಸಾಧ್ಯತೆಗಳ ಕುರಿತು ಕೇಳಿ ಬಂದಿತ್ತು. ಆತನ ಪತ್ತೆಗಾಗಿ ಎಸ್ ಡಿ ಆರ್ ಎಫ್ ತಂಡ ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡ ವೇಳೆ ನೀರಿನಲ್ಲಿ ಮುಳುಗಿದ ಲಾರಿಯಲ್ಲಿ ಆ ವ್ಯಕ್ತಿ ಕಂಡು ಬರದೇ ಹಲವರ ಊಹೆ ತಪ್ಪಾಗುವಂತಾಗಿತ್ತು. ನಂತರ ಕ್ರೇನ್ ಬಳಸಿ ಲಾರಿಯನ್ನು ನೀರಿನಿಂದ ಮೇಲೆತ್ತಲಾಗಿತ್ತು . ಸ್ಥಳೀಯರೂ ವಿಶೇಷವಾಗಿ ಶ್ರಮಿಸಿದ್ದರು. ನಂತರ ನದಿ ನೀರಿನಲ್ಲಿ ಮತ್ತು ಅಕ್ಕ ಪಕ್ಕದಲ್ಲಿ ಆತನ ಪತ್ತೆಗೆ ನಿರಂತರ ಕಾರ್ಯಚರಣೆ ನಡೆಸಲಾಯಿತು. ಘಟನೆ ನಡೆದ ಎರಡು ದಿನದ ಬಳಿಕ (ಸುಮಾರು 48 ಗಂಟೆ ನಂತರ ) ಅಂಕೋಲಾ ತಾಲೂಕಿನ ಗುಳ್ಳಾಪುರ ಸೇತುವೆ ಬಳಿ (ಮೊಗದ್ದೆ – ಹೊನ್ನೆ ಬೇಣ ವ್ಯಾಪ್ತಿಯ ನದಿ ಹರಿವಿನ ಪ್ರದೇಶದ ಹಿಂಡಿನ ಬಳಿ ಸಿಲುಕಿ )ಶವವಾಗಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ.
ರಸ್ತೆಯಲ್ಲಿ ಸಿಕ್ಕಿತ್ತು ಹಣತುಂಬಿದ ಪರ್ಸ್: ಮರಳಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ
ಕುಮಟಾ ತಾಲೂಕಿನ ಗೋಕರ್ಣ – ಬಂಕಿಕೊಡ್ಲ ಸಮೀಪದ ಹನೇಹಳ್ಳಿಯ ಸಂದೀಪ ಪೊಕ್ಕಾ ಆಗೇರ ಮೃತ ದುರ್ದೈವಿಯಾಗಿದ್ದಾನೆ. ಲಾರಿಯಲ್ಲಿ ಕಲ್ಲುಗಳನ್ನು (ಲೆಟ್ರೈಟ್ ಸ್ಟೋನ್) ತುಂಬಿ ಕೊಂಡು ಹೋಗಿ ನದಿ ಆಚೆ ಇರುವ ಗ್ರಾಮವೊಂದರಲ್ಲಿ ಖಾಲಿ ಮಾಡಿ ಮರಳುತ್ತಿದ್ದಾಗ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಮೇಲಿಂದ ಹರಿದು ಬರುತ್ತಿದ್ದ ನೀರಿನ ರಭಸ ಅಂದಾಜಿಸಲಾಗದೇ ಖಾಲಿ ಲಾರಿ ನದಿಯಲ್ಲಿ ಕೊಚ್ಚಿ ಹೋಗಿತ್ತು. ಚಾಲಕ ಸಹಿತ ಲಾರಿಯಲ್ಲಿದ್ದ 6 ಜನರಲ್ಲಿ 5 ಜನರು ಸ್ಥಳೀಯರ ಸಹಕಾರ ಮತ್ತು ಗುಳ್ಳಾಪುರ ಬೋಟ್ ಸಹಾಯದಿಂದ ಅದೃಷ್ಟವಶಾತ್ ಬಚಾವ್ ಆಗಿ ಬಂದಿದ್ದರು.
ಅಂಕೋಲಾ ತಾಲೂಕು ಗಡಿಯ ಪಕ್ಕದ ಯಲ್ಲಾಪುರದಲ್ಲಿ ಈ ಘಟನೆ ಸಂಭವಿಸಿದ್ದು, ಸುದ್ದಿ ತಿಳಿದ ಅಂಕೋಲಾ ತಹಶೀಲ್ದಾರ್ ಉದಯ್ ಕುಂಬಾರ್ ತಮ್ಮ ಸಿಬ್ಬಂದಿಗಳಾದ ರಾಘವೇಂದ್ರ ಜನ್ನು,ಭಾರ್ಗವ ನಾಯಕ,ಮತ್ತು ಜೀಪ್ ತುರ್ತು ಚಾಲಕ ಕುಮಾರ್ ನೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರಲ್ಲದೇ ಅಲ್ಲಿ ಹಾಜರಿರುವ ಸುಂಕಸಾಳ ಓಪಿ ಸಿಬ್ಬಂದಿ ಶೇಖರ್ ಸಿದ್ದಿ,ಯಲ್ಲಾಪುರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು, ಎಸ್ ಡಿ ಆರ್ ಎಫ್ ತಂಡ ,ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ,ಸ್ಥಳೀಯ ಸ್ಥಿತಿಗತಿಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯಕ್ಕೆ ಅಗತ್ಯ ಬಿದ್ದರೆ ಅಂಕೋಲಾ ತಾಲೂಕಿನ ಎಸ್ ಡಿ ಆರ್ ಎಫ್,ಅಗ್ನಿಶಾಮಕ ಹಾಗೂ ಇತರೆ ಸಿಬ್ಬಂದಿಗಳನ್ನು ಕಳುಹಿಸಿ,ಸಹಕಾರ ನೀಡುವ ಭರವಸೆ ನೀಡಿದ್ದರು.
ಅಂಕೋಲಾ ಪಿಎಸ್ಐ ಪ್ರವೀಣ್ ಕುಮಾರ , ಪ್ರೋಬೇಷನರಿ ಪಿಎಸ್ಐ ಸುನಿಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಹೆಚ್ಚಿದ ನೀರಿನ ಹರಿವಿನ ಪ್ರಮಾಣ, ಕತ್ತಲಾವರಿಸಿದ ರಾತ್ರಿ ಮತ್ತಿತರ ಕಾರಣಗಳಿಂದ ಶೋಧ ಕಾರ್ಯಕ್ಕೆ ತೊಡಕಾಗಿ, ಗುರುವಾರ ಬೆಳಿಗ್ಗೆ ಸ್ಥಳೀಯರ ಸಹಕಾರದಲ್ಲಿ ಯಲ್ಲಾಪುರದ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿಗಳು,ಅಗ್ನಿಶಾಮಕ ದಳ,ಕಂದಾಯ ಹಾಗೂ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಘಟಕ (ಎಸ್ ಡಿ ಆರ್ ಎಫ್ ) ವಿಶೇಷ ಕಾರ್ಯಾಚರಣೆ ನಡೆಸಿ ನದಿ ನೀರಿನಲ್ಲಿ ಮುಳುಗಿದ್ದ ಲಾರಿಯಲ್ಲಿ ಸಿಲುಕಿಕೊಂಡಿದ್ದ ಎನ್ನಲಾದ ಸಂದೀಪ್ ಪೊಕ್ಕ ಆಗೇರ ಈತನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ಆದರೆ ಲಾರಿಯಲ್ಲಿ ಆತನ ಪತ್ತೆಯಾಗದೇ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ಮಾತು ಕೇಳಿ ಬಂದಿತ್ತು. ಹರಸಾಹಸ ಪಟ್ಟು ಲಾರಿಯನ್ನು ನೀರಿನಿಂದ ಮೇಲಿತ್ತಿ, ದಡಕ್ಕೆ ಸಾಗಿಸಿದರು. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದು ಮಾರ್ಗದರ್ಶನ ಮಾಡಿದರು. ಆದರೆ ಸಂದೀಪ ನ ಪತ್ತೆ ಆಗಬೇ ಕುಟುಂಬಸ್ಥರ ಮುಖದಲ್ಲಿ ಆತಂಕ ಹೆಚ್ಚುವಂತಾಗಿತ್ತು. ಸಂಬಂಧಿಸಿದ ಇಲಾಖೆಗಳು ಕೊನೆ ಘಳಿಗೆಯಲ್ಲಿ ಅಷ್ಟಾಗಿ ಪತ್ತೆ ಕಾರ್ಯಾಚರಣೆಗೆ ಮುಂದಾಗಿಲ್ಲ ಎಂಬ ಸಾರ್ವಜನಿಕ ಅಭಿಪ್ರಾಯ ಕೇಳಿ ಬರುತ್ತಿರುವ ನಡುವೆಯೇ ನದಿ ತೀರದ ಮೀನುಗಾರರು, ಸುಂಕಸಾಳ, ರಾಮನಗುಳಿ,ಗುಳ್ಳಾಪುರ, ಡೋಂಗ್ರಿ ಹಾಗೂ ಮತ್ತಿತರ ಗ್ರಾಮಗಳ ಜನರು ಮತ್ತು ಸ್ಥಳೀಯ ಗ್ರಾಪಂ ಜನಪ್ರತಿನಿದಿಗಳು ಮತ್ತಿತರ ಮುಖಂಡರೆಲ್ಲಾ ನೂರಾರು ಸಂಖ್ಯೆಯಲ್ಲಿ ಸೇರಿ ಮಾನವೀಯ ನೆಲೆಯಲ್ಲಿ ನದಿ ಹಾಗೂ ತೀರದಲ್ಲಿ ಸಂದೀಪನ ಪತ್ತೆಗೆ ನಿರಂತರವಾಗಿ ಶ್ರಮಿಸಿ ಪತ್ತೆ ಕಾರ್ಯದ ಯಶಸ್ವಿಗೆ ಮೂಲ ಕಾರಣಿಕರ್ತರಾಗಿದ್ದಾರೆ ಎನ್ನಲಾಗಿದ್ದು ,ಸರ್ವರ ಸಹಕಾರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ನದಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡ ಲಾರಿ ಮುಗುಚಿ ಬೀಳುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಲಾರಿ ಚಾಲಕನ ದುಸ್ಸಾಹಸದ ಚಾಲನೆ ಮತ್ತು ಅವಿವೇಕತನದಿಂದ ಹೀಗಾಗಿದೆ ಎಂದು ಕೆಲವರು ಹಳಿದರೆ, ಇನ್ನು ಕೆಲವರು ಈ ಹಿಂದೆ ನದಿ ಪ್ರವಾಹಕ್ಕೆ ಗುಳ್ಳಾಪುರ ಸೇತುವೆ, ಅಕ್ಕ ಪಕ್ಷದ 1-2 ತೂಗು ಸೇತುವೆಗಳು ಕೊಚ್ಚಿ ಹೋಗಿ ಈ ವರೆಗೂ ನದಿ ತೀರದ ಅಕ್ಕ ಪಕ್ಕದ ಜನ ಸಂಪರ್ಕ ವ್ಯವಸ್ಥೆಗೆ ಪಡುತ್ತಿರುವ ಸಂಕಷ್ಟಗಳ ಸರಮಾಲೆಗೆ ಈ ಘಟನೆ ಸಾಕ್ಷಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ವಿಶೇಷ ಪ್ರಯತ್ನದಿಂದ ಬಹುಕೋಟಿ ವೆಚ್ಚದಲ್ಲಿ ರಾಮನಗುಳಿ ಕಲ್ಲೇಶ್ವರ ಶಾಶ್ವತ ಸೇತುವೆ ನಿರ್ಮಾಣ ಪ್ರಗತಿಯಲ್ಲಿದ್ದು ಗುಳ್ಳಾಪುರ ಮತ್ತಿತರ ಭಾಗಗಳಲ್ಲಿ ಸಚಿವ ಹೆಬ್ಬಾರ್ ಮತ್ತಷ್ಟು ಅನುಕೂಲ ಕಲ್ಪಿಸಿ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆ ಹಲವರಲ್ಲಿದೆ. ಅಂತೇಯೇ ಮನೆಗೆ ಆಧಾರಸ್ತಂಭವಾಗಿದ್ದ ಮೃತ ಸಂದೀಪ ನಿಲ್ಲದೇ ನೊಂದಿರುವ ಬಡ ಕುಟುಂಬಕ್ಕೆ ಸಂಬಂಧಿಸಿದವರು ನೆರವಿನ ಪರಿಹಾರ ತಲುಪಿಸಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ