Important
Trending

ಅಗಲಿದ ಸ್ವಾತಂತ್ರ್ಯ ಯೋಧ : ಕರಬಂದಿ ನಾಡಲ್ಲಿ ನೆರವೇರಿದ ಅಂತ್ಯ ಸಂಸ್ಕಾರ: ಜಿಲ್ಲಾಧಿಕಾರಿಗಳು, ಶಾಸಕರು ಮತ್ತಿತರ ಗಣ್ಯರಿಂದ ಅಂತಿಮ ನಮನ

ಅಂಕೋಲಾ: ಅಗಲಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಂಕೋಲಾ ತಾಲೂಕಿನ   ಸೂರ್ವೆಯ ವೆಂಕಣ್ಣ ಬೊಮ್ಮಯ್ಯ ನಾಯಕ (102 )ಅವರ ಅಂತ್ಯಕ್ರಿಯೆಯನ್ನು ಸೂರ್ವೆಯಲ್ಲಿ ಸಕಲ ಸರ್ಕಾರಿ  ಗೌರವಗಳೊಂದಿಗೆ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲಾಡಳಿತದ ಪರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೂರ್ವೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಶಾಸಕಿ ರೂಪಾಲಿ ನಾಯ್ಕ ಅಗಲಿದ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿ ಮೃತರ ಪತ್ನಿ ಪಾರ್ವತಿಗೆ ಸಾಂತ್ವನ ಹೇಳಿದರಲ್ಲದೇ ಬಹು ಹೊತ್ತು ಅಲ್ಲಿಯೇ ಕುಳಿತು ಕುಟುಂಬಸ್ಥರ ದುಃಖದಲ್ಲಿ ಭಾಗಿಯಾದರು.

DTH ಸರಿಪಡಿಸುತ್ತಿರುವ ವೇಳೆ ಅವಾಂತರ: ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಸಾರ್ವಜನಿಕರು  ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಸೂರ್ವೆಯ ರುದ್ರಭೂಮಿ ( ಮುಕ್ತಿ ಧಾಮಕ್ಕೆ ) ಸಾಗಿಸಿ ಅಲ್ಲಿ   ಅಂತ್ಯಕ್ರಿಯೆ ನಡೆಸಲಾಯಿತು. ಅಶೋಕ , ನಿತ್ಯಾನಂದ, ರಾಜೇಂದ್ರ ತಮ್ಮ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಶಾಂತಾ ನಾಯಕ, ನಾಗೇಶ ನಾಯಕ ಮತ್ತಿತರ ಗ್ರಾಮಸ್ಥರು ಸಹಕರಿಸಿದರು. ವಸಂತ ನಾಯಕ ಸರ್ವರ ಸಹಕಾರದಲ್ಲಿ ಸಕಲ ವಿಧಿ ವಿಧಾನ ನಡೆಸಲು ಕಾಳಜಿ ವಹಿಸಿದರು.

1921ರ ಜುಲೈ 21 ರಂದು ಜನಿಸಿದ ವೆಂಕಣ್ಣ ಬೊಮ್ಮಯ್ಯ ನಾಯಕ ಅವರು ಅಂಕೋಲಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬ್ರಿಟೀಷ್ ಸರಕಾರದ ವಿರುದ್ಧ ಅಸಹಕಾರ ಚಳುವಳಿ, ಜಂಗಲ್ ಸತ್ಯಾಗ್ರಹ, ಹುಲ್ಲು ಬನ್ನಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಕರಬಂಧಿ ಸತ್ಯಾಗ್ರಹ, ಉಳುವರೆಯಲ್ಲಿ ಜಂಗಲ್ ಸತ್ಯಾಗ್ರಹ ಭಾಗವಹಿಸಿ 1942ರ ಡಿಸೆಂಬರ್ ನಿಂದ 1943 ರ ಜನೆವರಿಯ ವರೆಗೆ ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಖೈದಿಯಾಗಿ ಶಿಕ್ಷೆ ಅನುಭವಿಸಿದ್ದರು. ಮೃತರು, ಪತ್ನಿ ಪಾರ್ವತಿ, ಮಕ್ಕಳಾದ ಅಶೋಕ, ನಿತ್ಯಾನಂದ, ರಾಜೇಂದ್ರ, ಇಂದಿರಾ, ಶಾಂತಿ, ಮಂಗಲಾ ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.

ಸ್ವಾತಂತ್ರ್ಯ ನಂತರ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಅವರು ತಳಗದ್ದೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸೂರ್ವೆ ಸಹಕಾರಿ ಸಂಘದ ಅಧ್ಯಕ್ಷರಾಗಿ, ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಸಂಸ್ಥಾಪಕ ನಿರ್ದೇಶಕರಾಗಿ, ಅಗಸೂರು ಗಂಗಾವಳಿ ಸಹಕಾರಿ ಹಂಚಿನ ಕಾರ್ಖಾನೆ ನಿರ್ದೇಶಕರಾಗಿ, ಅಂಕೋಲಾ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ ಹೀಗೆ ವಿವಿಧ ರಂಗಗಳಲ್ಲಿ  ಸೇವೆ ಸಲ್ಲಿಸಿ ಗಮನ ಸೆಳೆದಿದ್ದರು.

ಇತ್ತೀಚೆಗೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸರ್ಕಾರದ ಪರವಾಗಿ ಅವರ ಮನೆಗೆ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಹಾಜರಾಗಿ ಸನ್ಮಾನ ಗೌರವ ಸೂಚಿಸಿದ್ದರು., ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು  ಆಗಾಗ ಕಾರವಾರ ಹಾಗೂ ಅಂಕೋಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಒಳ ಪಡಿಸಲಾಗುತ್ತಿತ್ತಾದರೂ,ತೀವ್ರ ಆರೋಗ್ಯ ಸಮಸ್ಯೆಯಿಂದ ರವಿವಾರ ಸಾಯಂಕಾಲದ ವೇಳೆ ಸೂರ್ವೆಯ ಸ್ವ ಗೃಹದಲ್ಲಿ ಕೊನೆಯುಸಿರೆಳೆದರು.

ಗ್ರಾಮಸ್ಥರಲ್ಲಿ ಶೋಕದ ಛಾಯೆ

ನೂರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನದಿಂದ ಕರ್ನಾಟಕದ ಬಾರ್ಡೋಲಿ ಎಂಬ ಖ್ಯಾತಿಗೆ ಪಾತ್ರವಾಗಿದ್ದ ಅಂಕೋಲೆಯ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಗುರುತಿಸಿಕೊಂಡು  ಕೊನೆಯ ಕೊಂಡಿಯಂತಿದ್ದ ವೆಂಕಣ್ಣ ನಾಯಕ ದೈವಾಧೀನರಾಗಿದ್ದು ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು ಇನ್ನೂ ಮುಂದೆ ನೆನಪು ಮಾತ್ರ ಎಂಬಂತಾಗಿದೆ. ಪುಟ್ಟ ಗ್ರಾಮವಾದರೂ 2೦ ಕ್ಕೂ ಹೆಚ್ಚು ಸ್ವತಂತ್ರ ಹೋರಾಟಗಾರರನ್ನು ದೇಶಕ್ಕೆ ನೀಡಿ ಕರಬಂದಿ ನಾಡು ಎಂದು ಪ್ರಸಿದ್ಧಿಯಾದ ಸೂರ್ವೆಯ ಹಿರಿಯ ಚೇತನ ಕಣ್ಮರೆಯಾಗಿದ್ದು,ಗ್ರಾಮಸ್ಥರಲ್ಲಿಯೂ ಶೋಕದ ಛಾಯೆ ಆವರಿಸಿದೆ. ಮಾಜಿ ಸಚಿವ ಆರ್ ವಿ ದೇಶಪಾಂಡೆ ಮೃತರ   ಕುಟುಂಬಸ್ಥರಿಗೆ ಫೋನ್ ಕರೆ ಮಾಡಿ  ಸಾಂತ್ವನ ಹೇಳಿದರಲ್ಲದೇ ಜಿಲ್ಲೆಯ ಹಿರಿಯ ಚೇತನ ಕಣ್ಣರೆಯಾಗಿರುವುದಕ್ಕೆ ತೀವೃ ಸಂತಾಪ ವ್ಯಕ್ತಪಡಿಸಿದರು.

ತಹಶೀಲ್ದಾರ್ ಉದಯ್ ಕುಂಬಾರ್, ಸಿಪಿಐ ಸಂತೋಷ ಶೆಟ್ಟಿ, ಪಿ ಎ ಸೈ ಪ್ರವೀಣ ಕುಮಾರ, ವಲಯ ಅರಣ್ಯಾಧಿಕಾರಿ ಗಣಪತಿ  ವಿ ನಾಯಕ  ಬಾಸಗೋಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದು ಗೌರವ ಸೂಚಿಸಿದರು. ಭಾರತೀಯ ತಟರಕ್ಷಕ ಪಡೆಯ ಪರವಾಗಿಯಾ ವಿಶೇಷ ಗೌರವ ಸಲ್ಲಿಸಲಾಯಿತು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button